ಮೊಳಕಾಲ್ಮೂರು: ಲಾಕ್‌ಡೌನ್ ನಿರ್ಬಂಧದ ನಡುವೆಯೂ ಮೊಳಕಾಲ್ಮೂರಿನಿಂದ ಆಂಧ್ರದ ಉರುವುಕೊಂಡಕ್ಕೆ ಆಂಧ್ರ ಸಾರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ ಇಟ್ಟಿಗೆಯನ್ನು ಸಾರ್ವಜನಿಕರೇ ಪತ್ತೆ ಹಚ್ಚಿ ತಹಸೀಲ್ದಾರ್ ವಶಕ್ಕೆ ಒಪ್ಪಿಸಿದ್ದಾರೆ.
ಗುಂಡ್ಲೂರು ಸಮೀಪದ ಇಟ್ಟಿಗೆ ಭಟ್ಟಿಯಿಂದ ಕೆಎಚ್‌ಎಂ ಹೆಸರಿನ ಇಟ್ಟಿಗೆಗಳನ್ನು ಕಳೆದ ಮೂರು ದಿನಗಳಿಂದ ಆಂಧ್ರದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸಾಗಣೆ ಮಾಡಲಾಗುತ್ತಿದ್ದು, ಈ ಕುರಿತು ಸ್ಥಳೀಯರು ಸೋಮವಾರ ಮಧ್ಯಾಹ್ನ ಬಸ್ ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಉರುವುಕೊಂಡದ ಸಾರಿಗೆ ಡಿಪೋ ಮ್ಯಾನೇಜರ್ ಸೂಚನೆ ಮೇರೆಗೆ ದಿನಕ್ಕೆ ಒಂದು ಟ್ರಿಪ್‌ಗೆ ಆರು ಸಾವಿರ ಇಟ್ಟಿಗೆ ತುಂಬಿಕೊಂಡು ಡಿಪೋದಲ್ಲೇ ಆನ್‌ಲೋಡ್ ಮಾಡಲಾಗುತ್ತದೆ. ಇದಕ್ಕೆ ಪರವಾನಗಿ ಪತ್ರ ಕೊಟ್ಟಿದ್ದಾರೆ ಎಂದು ಅಲ್ಲಿನ ಸಾರಿಗೆ ಇಲಾಖೆ ಸಿಬ್ಬಂದಿ ಸಮಜಾಯಿಷಿ ನೀಡಿದರು.
ಇದನ್ನ ಒಪ್ಪದ ಸಾರ್ವಜನಿಕರು ತಹಸೀಲ್ದಾರರನ್ನು ಸ್ಥಳಕ್ಕೆ ಕರೆಸಿ ಲಾಕ್‌ಡೌನ್ ನಿರ್ಬಂಧ ಇರುವ ಕಾರಣ ಸಾರಿಗೆ ಬಸ್‌ಗಳು ರೋಡಿಗಿಳಿದಿಲ್ಲ. ಬಸ್ಸಿನಲ್ಲಿ ಇಟ್ಟಿಗೆ ಸಾಗಣೆ ಮಾಡುವುದು ಕಾನೂನು ಉಲ್ಲಂಘನೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಎಂ.ಬಸವರಾಜ್ ಪ್ರತಿಕ್ರಿಯಿಸಿ, ತಾಲೂಕು ಆಡಳಿತ ಇದಕ್ಕೆ ಆಸ್ಪದ ಕೊಟ್ಟಿಲ್ಲ. ನಮ್ಮ ಕಣ್ತಪ್ಪಿಸಿ ಸಾಗಣೆ ಮಾಡಿದ್ದಾರೆ. ಸ್ಥಳೀಯ ಇಟ್ಟಿಗೆ ಭಟ್ಟಿ ಮಾಲೀಕರು ಸಹ ಆಂಧ್ರಕ್ಕೆ ಇಟ್ಟಿಗೆ ಸಾಗಿಸಲು ಪರವಾನಗಿ ಪಡೆದಿಲ್ಲ. ಈ ಬಗ್ಗೆ ಪರಿಶೀಲನೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.
ತನಿಖೆ ತಡೆಸಲು ಒತ್ತಾಯ: ಕೃಷಿ ಕೆಲಸ, ಗೊಬ್ಬರ, ಇಟ್ಟಿಗೆ ಸಾಗಣೆಗಾಗಿ ಜಮೀನಿನ ಪಹಣಿ ಒತ್ತೆ ಇಟ್ಟು ಟ್ರ್ಯಾಕ್ಟ್‌ರ್ ತಂದಿದ್ದೇವೆ. ಒಂದೂವರೆ ತಿಂಗಳಿಂದ ಬಾಡಿಗೆ ಕೆಲಸವಿಲ್ಲದೆ ಗಾಡಿಗಳು ಮನೆಯಲ್ಲೇ ನಿಂತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಹೊಟ್ಟೆ ಮೇಲೆ ಹೊಡೆಯಲೆಂದೇ ಸಾರಿಗೆ ಬಸ್‌ನಲ್ಲಿ ಇಟ್ಟಿಗೆ ಸಾಗಿಸಲಾಗುತ್ತಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಟ್ರ್ಯಾಕ್ಟ್‌ರ್ ಚಾಲಕರು ಮತ್ತು ಮಾಲೀಕರಾದ ಕೃಷ್ಣಪ್ಪ, ಆನಂದ ಇತರರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.