ಕೆಂಚಪ್ಪ ಕೆ.ಮೊಳಕಾಲ್ಮೂರು: ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಪಕ್ಕುರ್ತಿ ಕೆರೆಯನ್ನು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟಿರುವುದಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ.
ತಾಲೂಕಿನ ದೇವಸಮುದ್ರ ಹೋಬಳಿಯ ಪಕ್ಕುರ್ತಿ ಕೆರೆಯು 350 ಎಕರೆ ವಿಸ್ತೀರ್ಣ ಹೊಂದಿದೆ. ಒಂದು ಕಾಲದಲ್ಲಿ ಕೆರೆಯ ಹಿಂಭಾಗದ ಎಂಟತ್ತು ಹಳ್ಳಿಗಳ 2 ಸಾವಿರ ಎಕರೆ ಜಮೀನಿನ ಜತೆಗೆ 40 ಹಳ್ಳಿಗಳಿಗೆ ಕುಡಿಯುವ ನೀರು, ಕೊಳವೆಬಾವಿಗಳಿಗೆ ಆಧಾರವಾಗಿತ್ತು.
ಈಗ ಇದನ್ನು ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈ ಬಿಟ್ಟಿರುವ ಉದ್ದೇಶವೇನು ಎಂದು ಕೆರೆ ಅಚ್ಚಕಟ್ಟುದಾರರು, ರೈತರು, ಮುಖಂಡರು, ಪ್ರಗತಿಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.
ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಮೂಲಕ ರೈತರ ಹಿತ ಕಾಪಾಡುತ್ತೇವೆಂದು ದಶಕಗಳಿಂದಲೂ ಜನಪ್ರತಿನಿಧಿಗಳು ಕೊಟ್ಟ ಭರವಸೆ ಹುಸಿಯಾಗುತ್ತಿವೆ. 20 ವರ್ಷಗಳಿಂದ ಭೀಕರ ಬರ ಆವರಿಸಿ ಕುಡಿಯುವ ನೀರಿಗೂ ಅಭಾವ ಇದೆ.
ಪರಿಸ್ಥಿತಿ ಹೀಗಿರುವಾಗ ಭದ್ರಾ ಮೇಲ್ದಂಡೆ ಯೋಜನೆಯಡಿ ಪಕ್ಕುರ್ತಿ ಕೆರೆ ತುಂಬುವ ಆಶಾಭಾವನೆ ಮೂಡಿತ್ತು. ಈ ಕೆರೆಗೆ ಎ-ಸ್ಕೀಂನಲ್ಲೇ ನೀರು ತುಂಬಿಸಿದರೆ ಅನುಕೂಲವಾಗಲಿದೆ ಎಂದು ರೈತ ಮುಖಂಡರಾದ ಹನುಮಂತಪ್ಪ, ಗಡ್ಡೆ ತಿಪ್ಪಣ್ಣ, ಕೆ.ಆರ್.ಮಲ್ಲಿಕಾರ್ಜುನ, ಗಂಗಾರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶಂಕರ್‌ರಡ್ಡಿ, ಎನ್.ಆರ್.ಕೆ.ಪುರ.
ಬೆಟ್ಟಗಳ ನಡುವಿರುವ ಪಕ್ಕುರ್ತಿ ಕೆರೆಗೆ ಸಂಡೂರು ಅರಣ್ಯ ಪ್ರದೇಶದಿಂದ ಸಾಕಷ್ಟು ಮಳೆ ನೀರು ಹರಿದು ಬರುತ್ತಿತ್ತು. 20 ವರ್ಷದ ಹಿಂದೆ ಕೆರೆ ಹಿಂಭಾಗದ ಪಕ್ಕುರ್ತಿ, ಜೆಬಿಹಳ್ಳಿ, ನಲ್ಲಾರಡ್ಡಿ ಕೊಂಡಾಪುರ, ರಾಂಪುರ ಸೇರಿ 10 ಹಳ್ಳಿಗಳ ರೈತರು ಅಚ್ಚುಕಟ್ಟು ಪ್ರದೇಶದಲ್ಲಿ ಎಲೆತೋಟ, ಇರುಳ್ಳಿ, ರಾಂಪುರ ಬದನೆ, ಹತ್ತಿ ಸಮೃದ್ಧವಾಗಿ ಬೆಳೆಯುತ್ತಿದ್ದರು. ಅದು ಮರುಕಳಿಸಲು ಕೆರೆಗೆ ಭದ್ರಾ ನೀರು ತುಂಬಿಸಬೇಕು.
ಆರ್.ಎಂ.ಅಶೋಕ್, ವಕೀಲರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಪಕ್ಕುರ್ತಿ ಕೆರೆ ಕೈಬಿಟ್ಟಿರುವುದು ನೋವಿನ ಸಂಗತಿ. ಸಂಬಂಧಿಸಿದ ಉನ್ನತ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಸಂಗ್ರಹಿಸಿ ಸೇರ್ಪಡೆಗಾಗಿ ಕ್ಷೇತ್ರದ ಸಚಿವರು, ಸರ್ಕಾರದ ಮೇಲೆ ಒತ್ತಡ ತರಲಾಗುವುದು.
ಎಚ್.ಟಿ.ನಾಗೀರೆಡ್ಡಿ, ರೈತ ಮುಖಂಡ.
ಬರ ನಿರಂತರ ಕಾಡುತ್ತಿರುವ ಕಾರಣ ಈ ಭಾಗದ ಜನ- ಜಾನುವಾರುಗಳು ಬದುಕುಳಿಯಲು ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲೇ ಕಾರ್ಯರೂಪಕ್ಕೆ ತರುವಂತೆ ಹಕ್ಕೊತ್ತಾಯಕ್ಕೆ ಸಿದ್ಧ.
ಕೆರೆಗಳಿಗೆ ನೀರು ತುಂಬಿಸಲೆಂದು ಈ ಹಿಂದೆ ಮಾಡಿರುವ ಪಟ್ಟಿಯಲ್ಲಿ ಪಕ್ಕುರ್ತಿ ಕೆರೆ ಹೆಸರು ಇಲ್ಲ. ಇದರ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಮಹೇಂದ್ರ, ಭದ್ರಾ ಮೇಲ್ದಂಡೆ ಯೋಜನೆಯ ಸಹಾಯಕ ಇಂಜಿನಿಯರ್.