ಮೊಳಕಾಲ್ಮೂರು: ಸರ್ಕಾರಿ ಸೇವೆಗೆ ಹಾಜರಾಗಲು ನಿಗದಿತ ವೇಳೆಗೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮೂರು ತಿಂಗಳಿಂದ ಬಂದಾಗಿದ್ದ ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಕರ್ತವ್ಯ ನಿರತರಾಗಬೇಕೆಂಬ ಸರ್ಕಾರ ಮತ್ತು ಇಲಾಖೆ ಸೂಚಿಸಿದೆ. ಇದರಿಂದ ನಗರ-ಪಟ್ಟಣ ಅಥವಾ ದೂರದ ಊರುಗಳಿಂದ ಬರುವ ಶಿಕ್ಷಕರು ಸಕಾಲಕ್ಕೆ ಹೋಗಲು ಸಾರಿಗೆ ಅಥವಾ ಖಾಸಗಿ ಬಸ್ ಸಂಚಾರ ಇಲ್ಲದೆ ತುಂಬಾ ತೊಂದರೆಯಾಗಿದೆ.
ಅನ್ಯ ಇಲಾಖೆಗಳ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ನೌಕರರು ಕಚೇರಿ ತಲುಪಲು ಪರದಾಡುತ್ತಿದ್ದಾರೆ. ಬೈಕ್, ಕಾರುಗಳಲ್ಲಿ ದುಬಾರಿ ಬೆಲೆ ತೆತ್ತು ಬರಬೇಕು. ಇಲ್ಲವಾದರೆ ಲಗೇಜ್ ವಾಹನಗಳಲ್ಲಿ ಬರುವ ಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.
ಆದ್ದರಿಂದ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ ಮಾರ್ಗದಲ್ಲಿ ಸಾರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ.ಬಸವರಾಜ್, ಕೂಡಲೆ ಚಳ್ಳಕೆರೆ ಸಾರಿಗೆ ಡಿಪೋ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ಸಂಚಾರಕ್ಕೆ ಶಿಫಾರಸು ಮಾಡಲಾಗುವುದು. ಹಾಗೆಯೇ ಬಳ್ಳಾರಿಯಿಂದಲೂ ಸಂಚಾರಕ್ಕೆ ಸೂಕ್ತ ಕ್ರಮ ವಹಿಸಲಾಗುದು ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್.ರಾಜಣ್ಣ, ಉಪಾಧ್ಯಕ್ಷ ಎಂ.ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಮಾಲೀಕ್, ಕರಿಬಸಪ್ಪ, ಎಸ್.ಈರಣ್ಣ, ಚಿತ್ತಯ್ಯ, ಇತರರಿದ್ದರು.