ಜಿಲ್ಲೆ

ರಾಂಪುರ ಬಳಿ ಹೆದ್ದಾರಿ ತಡೆ

Chitradurga

ಮೊಳಕಾಲ್ಮೂರು: ನಿವೇಶನ ಮತ್ತು ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಸಂಘಟನೆ ಬಳ್ಳಾರಿಯಿಂದ-ಬೆಂಗಳೂರಿಗೆ ಆರಂಭಿಸಿರುವ ಸೂರಿಗಾಗಿ ಸಮರ ಕಾಲ್ನಡಿಗೆ ಜಾಥಾ ಮಂಗಳವಾರ ಪಟ್ಟಣಕ್ಕೆ ಆಗಮಿಸಿತು.

ರಾಂಪುರ ಪ್ರವೇಶಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಕಾರ್ಯದರ್ಶಿ ಸಾತಿ ಸುಂದರ್ ಮಾತನಾಡಿ, ಗ್ರಾಮ ಸ್ವರಾಜ್ಯವಾಗಬೇಕು ಎಂಬ ಮಹಾತ್ಮ ಗಾಂಧೀಜಿ ಕನಸು 70 ವರ್ಷಗಳಾದರೂ ಈಡೇರಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಆಪಾದಿಸಿದರು.

ರಾಜ್ಯದಲ್ಲಿ 36 ಲಕ್ಷ ನಿರ್ಗತಿಕ ಹಾಗೂ ಬಡ ಕುಟುಂಬಗಳು ನಿವೇಶನ ಮತ್ತು ವಸತಿ ಸೌಲಭ್ಯ ಇಲ್ಲದೆ ಗುಡಿ, ಗೋಪುರಗಳಲ್ಲಿ ಜೀವನ ನಡೆಸುತ್ತಿವೆ. ಈ ಕುರಿತು ಉದಾಸೀನ ತೋರುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಳ್ಳಾರಿಯಲ್ಲಿ ಫೆ.2ರಂದು ಕಾಲ್ನಡಿಗೆ ಜಾಥಾಕ್ಕೆ ಚಾಲನೆ ಕೊಡಲಾಗಿದೆ ಎಂದರು.

ಚಿತ್ರದುರ್ಗ, ದಾವಣಗೆರೆ, ತುಮಕೂರು ಮಾರ್ಗವಾಗಿ 60 ದಿನಗಳ ಕಾಲ 927 ಕಿಮೀ ಜಾಥಾ ಸಂಚರಿಸಲಿದೆ. ನಂತರ ಬೆಂಗಳೂರಿನಲ್ಲಿ ಬಹಿರಂಗ ಸಭೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಿಪಿಐ ಸಹ ಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ದನ, ನಿವೇಶನ ಮತ್ತು ವಸತಿ ರಹಿತ ಸಂಘಟನೆ ಅಧ್ಯಕ್ಷ ಎಂ.ಸಿ.ಡೊಂಗ್ರೆ, ಪ್ರಧಾನ ಕಾರ್ಯದರ್ಶಿ ಎ.ಎಸ್.ಮೋನಪ್ಪ, ಎಚ್.ಎಂ.ಸಂತೋಷ್, ಪ್ರಸನ್ನಕುಮಾರ, ಡಿ.ಪೆನ್ನಯ್ಯ ಇದ್ದರು.