ಮೊಳಕಾಲ್ಮೂರು: ವಿದ್ಯಾರ್ಥಿಗಳು ಸಂವಿಧಾನದ ಆಶಯ ಪಾಲಿಸುವ ಮೂಲಕ ಪ್ರಬುದ್ಧ ನಾಡು ಕಟ್ಟುವ ಸಂಕಲ್ಪ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಶ್ರೀನಿವಾಸ ನಾಯಕ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು, ಮೂಲ ಕರ್ತವ್ಯ ಮತ್ತು ಸಂವಿಧಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ. ಇದರಂತೆ ಬದುಕು ರೂಪಿಸಿಕೊಳ್ಳಬೇಕು. ಕಾನೂನು, ಸಂವಿಧಾನದ ಆಶಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದರು.
ವಕೀಲ ರಾಜಶೇಖರ ನಾಯಕ ಮಾತನಾಡಿ, ನಾವುಗಳು ಸಂವಿಧಾನದ ಆಶಯಗಳನ್ನು ಸರಿಯಾಗಿ ಪಾಲಿಸದ ಕಾರಣ ಅಸಮಾನತೆ, ಜಾತೀಯತೆ ಈಗಲೂ ಜೀವಂತ ಇದೆ. ಇವುಗಳ ನಿರ್ಮೂಲನೆಗೆ ವಿದ್ಯಾರ್ಥಿಗಳು ಪಣ ತೊಡಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ, ವಕೀಲರಾದ ಕೆ.ಎಂ.ರಾಮಾಂಜನಿ, ಅನಂತಮೂರ್ತಿ, ಸಿದ್ದಪ್ಪ, ಆನಂದ್, ಮುಖ್ಯಶಿಕ್ಷಕ ಡಿ.ವಿ.ಕೃಷ್ಣಮೂರ್ತಿ, ಶಿಕ್ಷಕರಾದ ಡಿ.ಓಬಮ್ಮ, ಓ.ವಸಂತಪ್ಪ, ದಾದಾಪೀರ್, ಬಿ.ಎಂ.ಮುಜಾಮಿಲ್, ಹುಸೇನ್, ಎಚ್.ಮೆಹಬೂಬ್ ಇತರರಿದ್ದರು.