ಜಿಲ್ಲೆ

ರೈತನ ಜೇಬು ತುಂಬಿಸಿದ ನೇರಳೆ

Chitradurga

ಕೆ.ಕೆಂಚಪ್ಪ ಮೊಳಕಾಲ್ಮೂರು: ತಾಲೂಕಿನ ರೈತನೊಬ್ಬ 22 ಎಕರೆಯಲ್ಲಿ ಬೆಳೆದಿರುವ ಮಾವು, ಸೀತಾಫಲ, ಜಮ್ಮು ನೇರಳೆ ಬೆಳೆದಿದ್ದು, ಉತ್ತಮ ಫಸಲಿನೊಂದಿಗೆ ಆದಾಯದ ನಿರೀಕ್ಷೆ ಹಿಮ್ಮಡಿಗೊಳಿಸಿದೆ.

ರಾಂಪುರದ ರೈತ ಎ.ಗಣೇಶಬಾಬು ತಮ್ಮ ಜಮೀನಲ್ಲಿ ಬಾರ್ ಡೋಲಿ ಮತ್ತು ಗುಜರಾತ್ ತಳಿಯ ಜಮ್ಮು ನೇರಳೆ ನಾಟಿ ಮಾಡಿದ್ದು, ಭರ್ಜರಿ ಇಳುವರಿ ಬಂದಿದೆ.

ಕಳೆದ 15 ದಿನಗಳಿಂದ ದಿನಕ್ಕೆ 80ರಿಂದ 100 ಕೆಜಿ ಹಣ್ಣು ಕಟಾವು ಮಾಡಲಾಗುತ್ತಿದೆ. ಸದ್ಯ ಕೆಜಿ ಹಣ್ಣಿಗೆೆ 100 ರೂ. ಬೆಲೆ ಇದ್ದು, ಮೊಳಕಾಲ್ಮೂರು, ಚಳ್ಳಕೆರೆ, ಬಳ್ಳಾರಿ ವ್ಯಾಪಾರಸ್ಥರು ತೋಟಕ್ಕೆ ಬಂದು ಖರೀದಿ ಮಾಡುತ್ತಿದ್ದಾರೆ.

ಈ ವರ್ಷ ಮೂರು ಟನ್‌ಗೂ ಅಧಿಕ ಇಳುವರಿ ನಿರೀಕ್ಷೆ ಹೊಂದಿದ್ದು, ಖರ್ಚು ತೆಗೆದು 3.50 ಲಕ್ಷ ರೂ. ಆದಾಯ ಕೈಸೇರಲಿದೆ ಎಂದು ರೈತ ತಿಳಿಸಿದ್ದಾರೆ.

ಆಂಧ್ರದ ರಾಜ್‌ಮಂಡ್ರಿಯಿಂದ ಸಾವಿರ ಸಸಿಗಳನ್ನು ತಂದು 20-20 ಉದ್ದಗಲ ಅಳತೆಯಲ್ಲಿ ನಾಟಿ ಮಾಡಿ ಸಾವಯವ ಗೊಬ್ಬರ ಮತ್ತು ಸಮರ್ಪಕ ನೀರು ಕೊಟ್ಟು ಕಳೆದ 6 ವರ್ಷಗಳಿಂದ ಪಾಲನೆ ಮಾಡಲಾಗಿದ್ದು, ಈಗ ಫಲ ನೀಡುತ್ತಿದೆ.

12 ಎಕರೆಯಲ್ಲಿ 1750 ವಿವಿಧ ತಳಿಯ ಮಾವು ಹಾಗೂ 500 ಸೀತಾಫಲ ನಾಟಿ ಮಾಡಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಆದರೆ, ದಿನ ರಾತ್ರಿ ಕರಡಿಗಳ ಹಾವಳಿಯಿಂದ 2 ಟನ್‌ನಷ್ಟು ಹಣ್ಣುಗಳ ನಷ್ಟವಾಗಿದೆ. ಆದರೂ 2.50 ಲಕ್ಷ ರೂ. ಆದಾಯ ಕೈಸೇರಿದೆ ಎನ್ನುತ್ತಾರೆ ರೈತ ಗಣೇಶ್‌ಬಾಬು.

ಮಣ್ಣಿನ ಗುಣಕ್ಕೆ ತಕ್ಕಂತೆ ಮಿಶ್ರ ಬೆಳೆ ಪದ್ಧತಿ ಅನುಸರಿಸಿದರೆ ರೈತರು ಲಾಭ ಗಳಿಸಲು ಸಾಧ್ಯ. ಸದ್ಯ ತೋಟಗಾರಿಕೆ ಬೆಳೆ ನಾಟಿ ಮಾಡಿದ್ದೇನೆ. ಜೇನು ಸಾಕಣೆ ಕುರಿತು ಆಸಕ್ತಿ ಇದ್ದು, ಕರಡಿಗಳ ಉಪಟಳದ ಕಾರಣಕ್ಕೆ ವಿಳಂಬವಾಗಿದೆ.
ಎ.ಗಣೇಶಬಾಬು ರೈತ