ಮೊಳಕಾಲ್ಮೂರು: ನರಗುಂದ, ನವಲಗುಂದದಲ್ಲಿ ರೈತರು ಹುತಾತ್ಮರಾದುದು ಚರಿತ್ರೆಯಲ್ಲಿ ಕರಾಳ ದಿನವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ನುಂಕೆಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಗುರುವಾರ ರೈತ ಸಂಘ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರ ಬೆನ್ನಲುಬಾಗಿರುವ ಮಹಾದಾಯಿ, ರೈತ ವಿರೋಧಿ ಮಸೂದೆ ವಾಪಸ್ ಪಡೆಯುವುದು, ಕನಿಷ್ಠ ಬೆಂಬಲ ಬೆಲೆ ನಿಗದಿ, ಕೃಷ್ಣಾ- ಕಾವೇರಿ ಕೊಳ್ಳದ ಯೋಜನೆ ತ್ವರಿತ, ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಹೊರೆ ತಗ್ಗಿಸುವುದು ಹಾಗೂ ಪ್ರವಾಹ ಪೀಡಿತ ಪ್ರದೇಶದ ನಷ್ಟ ಪರಿಹಾರಕ್ಕೆ ವೈಜ್ಞಾನಿಕ ಚಿಂತನೆಗೆ ಸರ್ಕಾರಗಳನ್ನು ಎಚ್ಚರಿಸಲು ದೃಢ ನಿಲುವು ತೆಗೆದುಕೊಂಡಿರುವ ರೈತರ ಸಾಂಘಿಕ ಆಂದೋಲನದ ನಡೆ ಪ್ರಗತಿಪರವಾದುದು ಎಂದರು.
ಡಾ. ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಘೋಷಿಷಬೇಕು. ವಿದ್ಯುತ್ ತಿದ್ದುಪಡಿ ಕರಡನ್ನು ವಾಪಸ್ ಪಡೆಯಬೇಕು. ಹೊಸ ಶಿಕ್ಷಣ ನೀತಿ ಹೆಸರಿನಲ್ಲಿ ಎಲ್ಲ ವರ್ಗದ ಮಕ್ಕಳಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು. ಸಾಮಾಜಿಕ ಪರಿವರ್ತನೆಗೆ ಕಾರಣರಾಗಿರುವ ಮಹನೀಯರ ವಿಚಾರಧಾರೆಗಳನ್ನು ಪಠ್ಯ ಪರಿಷ್ಕರಣೆಯಲ್ಲಿ ವಿರೂಪಗೊಳಿಸುವುದು ಸರಿಯಲ್ಲ ಎಂದರು.
ರೈತ ಸಂಘದ ಪದಾಧಿಕಾರಿಗಳಾದ ಎಚ್.ಟಿ.ಚಂದ್ರಣ್ಣ, ಮಂಜುನಾಥ, ಕನಕ ಶಿವಮೂರ್ತಿ, ನಿಂಗಣ್ಣ, ಬಸವರಾಜ್, ಪಾಲಯ್ಯ, ಬೊಮ್ಮಣ್ಣ, ಈರಣ್ಣ, ತಿಪ್ಪೇಸ್ವಾಮಿ, ನಾಗರಾಜ್, ಪಾಪಣ್ಣ ಇತರರಿದ್ದರು.