ಜಿಲ್ಲೆ

ಶಿಕ್ಷಕರ ದಿನಾಚರಣೆಗೆ ಮೊಳಕಾಲ್ಮೂರು ಸಿಂಗಾರ

Davangere - Desk - Mahesh Babu E

ಕೆ.ಕೆಂಚಪ್ಪ ಮೊಳಕಾಲ್ಮೂರು: ಭಾರತದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನದಂದು ಅವರ ಆಶಯದಂತೆ ಪ್ರತಿ ವರ್ಷ ಸೆ.5 ರಂದು ಶಿಕ್ಷಕರ ದಿನವನ್ನಾಗಿ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮೊಳಕಾಲ್ಮೂರು ಪಟ್ಟಣದಲ್ಲಿ ದಿನಾಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕಾರ್ಯಕ್ರಮ ಆಯೋಜಿಸಿರುವ ಗುರುಭವನ ಬಣ್ಣ, ಬಣ್ಣದ ಚಿತ್ತಾರಗಳಿಂದ ಸಿಂಗಾರಗೊಂಡಿದೆ.

ಇಡೀ ಶಿಕ್ಷಕ ವೃಂದ ವರ್ಷಕ್ಕೊಮ್ಮೆ ಒಂದೆಡೆ ಸೇರಿ ಸಂಭ್ರಮಿಸುವ ಜತೆಗೆ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುವ ವೇದಿಕೆಯಾಗಿಯೂ ಶಿಕ್ಷಕರ ದಿನಾಚರಣೆ ಅವಕಾಶ ಕಲ್ಪಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘ ಜನಪ್ರತಿನಿಧಿಗಳ ಮುಂದೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿವೆ. ಏಳನೇ ವೇತನ, ನಿವೃತ್ತಿ ಪಿಂಚಣಿ, ಶಿಕ್ಷಕರ ಕೊರತೆ ಸಮಸ್ಯೆ, ಬಿಸಿಯೂಟ ಮತ್ತು ಚುನಾವಣೆ ಸೇರಿ ಹೆಚ್ಚುವರಿ ಕೆಲಸದ ಒತ್ತಡದಿಂದ ಮುಕ್ತರಾಗಿಸಿ ಪಾಠ, ಪ್ರವಚನಕ್ಕೆ ಸೀಮಿತ ಮಾಡುವುದು… ಹೀಗೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳಲು ಸಿದ್ಧತೆ ನಡೆದಿವೆ.

ಮಕ್ಕಳನ್ನು ಸಮಗ್ರ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ತರುವ ಮಹಾದಾಸೆ ಹೊಂದಿರುವ ಶಿಕ್ಷಕ ವರ್ಗಕ್ಕೆ ಸರ್ಕಾರಗಳು ಪೂರಕವಾಗಿ ವರ್ತಿಸಬೇಕು. ಆದರೆ, ಪ್ರತಿ ವರ್ಷ ಬೇಡಿಕೆಗಳನ್ನು ಕೇಳಿ ಮರೆಯುತ್ತಿವೆ ಎಂಬ ಅಸಮಾಧಾನ ಶಿಕ್ಷಕ ವರ್ಗದಲ್ಲಿ ಮನೆ ಮಾಡಿದೆ.

ವಿಶೇಷವಾಗಿ ಕನ್ನಡ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ, ಗಡಿ ಅಂಚಿನ ಪ್ರದೇಶದ ಕನ್ನಡ ಶಾಲೆ ಮಕ್ಕಳಿಗೆ ಸಮಗ್ರ ಶಿಕ್ಷಣ ಸಿಗಬೇಕೆಂಬ ಪರಿಕಲ್ಪನೆಯಲ್ಲಿ ವಿಶೇಷ ಅನುದಾನ ಬಿಡುಗಡೆಯಾಗುತ್ತಿದ್ದರೂ ಅನೇಕ ಕಡೆ ಕೊಠಡಿ, ಶಿಕ್ಷಕರು, ಆಟದ ಮೈದಾನ ಇತರ ಅನೇಕ ಸಮಸ್ಯೆಗಳು ಜೀವಂತವಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ಶಿಕ್ಷಕರ ದಿನಾಚರಣೆ ಉತ್ತರ ಕಂಡುಕೊಳ್ಳಬೇಕು ಎಂಬುದು ಶಿಕ್ಷಕರ ಒತ್ತಾಸೆ ಆಗಿದೆ.

ಶಿಕ್ಷಕರು ಕೂಡ ತಮ್ಮ ಜವಾಬ್ದಾರಿ ಅರಿತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸ್ಥಳೀಯ ಸಂಪನ್ಮೂಲ, ದಾನಿಗಳ ಮೂಲಕ ಶ್ರಮಿಸಬೇಕು. ಕಾನ್ವೆಂಟ್, ಖಾಸಗಿ ಶಾಲೆಗಳತ್ತ ಆಕರ್ಷಣೆಗೆ ಒಳಗಾಗಿರುವ ಪಾಲಕರನ್ನು ಸರ್ಕಾರಿ ಶಾಲೆಗಳತ್ತ ಮುಖ ಮಾಡುವಂತೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆಗೆ ಮುಂದಾಗಬೇಕು ಎಂಬುದು ಶಿಕ್ಷಣಪ್ರೇಮಿಗಳ ಒತ್ತಾಸೆ ಆಗಿದೆ.

ಒಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಬಂತೆಂದರೆ ಒಂದೆಡೆ ಸಂಭ್ರಮ, ಮತ್ತೊಂದೆಡೆ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಆತಂಕ ಎದುರುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸುವ ಮೂಲಕ ಸರ್ಕಾರಿ ವ್ಯವಸ್ಥೆ ಬಲಗೊಳಿಸಲು ಮುಂದಾಗಬೇಕು ಎಂಬುದು ಜನರ ಒತ್ತಾಯ.