ಜಿಲ್ಲೆ

19 ಕ್ಕೆ ನಿವೃತ್ತ ನೌಕರರ ಸಂಘದ ರ‌್ಯಾಲಿ

Chitradurga

ಮೊಳಕಾಲ್ಮೂರು: ಪಿಂಚಣಿ ಹೆಚ್ಚಳ, ಆರೋಗ್ಯ ವಿಮೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಫೆ.19 ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಿವೃತ್ತ ನೌಕರರ ಸಂಘ ಕೈಗೊಂಡ ರಾಜ್ಯ ಮಟ್ಟದ ರ‌್ಯಾಲಿಯಲ್ಲಿ ಜಿಲ್ಲೆಯಿಂದ ನಾಲ್ಕು ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ರಂಗಪ್ಪರಡ್ಡಿ ತಿಳಿಸಿದರು.

ಪಟ್ಟಣದ ಪದ್ಮಶಾಲಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾಜ್ಯ ಮಟ್ಟದ ರ‌್ಯಾಲಿಯಲ್ಲಿ ಭಾಗವಹಿಸುವ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಸ್ಥಾಪನೆಯಾಗಿ 60 ವರ್ಷ ಕಳೆದರೂ ಬೇಡಿಕೆ ಮಾತ್ರ ಈಡೇರಿಲ್ಲ. 2010ರಲ್ಲಿ ಸರ್ಕಾರಿ ನಿವೃತ್ತರ ನಡಿಗೆ ವಿಧಾನಸೌಧದ ಕಡೆ ಎಂಬ ಬೃಹತ್ ರ‌್ಯಾಲಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ರ‌್ಯಾಲಿ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಚಳ್ಳಕೆರೆ ತಾಲೂಕು ಅಧ್ಯಕ್ಷ ಕರಿಯಪ್ಪ ಮಾತನಾಡಿ, ರ‌್ಯಾಲಿಯಲ್ಲಿ ಎಲ್ಲ ನಿವೃತ್ತ ನೌಕರರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಎಸ್.ಟಿ. ಬ್ರಹ್ಮಾನಂದ, ಉಪಾಧ್ಯಕ್ಷ ಪಾಲಾಕ್ಷಪ್ಪ, ಕಾರ್ಯದರ್ಶಿ ದಾನಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ. ಮಂಜುನಾಥ, ಪದಾಧಿಕಾರಿಗಳಾದ ಎಚ್. ಯಲ್ಲಪ್ಪ, ಮೀಸೆ ನಿಂಗಪ್ಪ, ಮಾರಪ್ಪ, ತಿಪ್ಪೇಸ್ವಾಮಿ, ಬಸವಕುಮಾರ್, ರುದ್ರಪ್ಪ, ಶಿವಣ್ಣ, ಬಸವರಾಜಪ್ಪ ಮತ್ತಿತರರಿದ್ದರು.