ಕೆ.ಕೆಂಚಪ್ಪ ಮೊಳಕಾಲ್ಮೂರು: ತಾಲೂಕಿನ ನೇರ‌್ಲಹಳ್ಳಿಯ ಇಬ್ಬರು ರೈತರು ಕುರಿ ಸಾಕಣೆ ಮೂಲಕ ಕಡಿಮೆ ಅವಧಿಯಲ್ಲಿ ಆದಾಯ ಕಂಡು ಇತರರಲ್ಲಿ ಭರವಸೆ ಮೂಡಿಸಿದ್ದಾರೆ.
ನೇರ‌್ಲಹಳ್ಳಿ ಗ್ರಾಮದ ರೈತ ಅಜ್ಜಣ್ಣ, ತೋಪಿನ ಸೂರ್ಯ ಪಾಪಯ್ಯ ತಲಾ 80 ಟಗರು ಮರಿಗಳನ್ನು ಗಂಗಾವತಿಯಿಂದ ತಂದು ಮೂರು ತಿಂಗಳ ಕಾಲ ಪಾಲನೆ ಮಾಡಿದ್ದು, ತಲಾ ಮೂರು ಲಕ್ಷ ರೂ. ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಬೇಸಿಗೆ ಆರಂಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 1.25 ಲಕ್ಷ ರೂ. ಹಾಗೂ ವೈಯಕ್ತಿಕ 2.50 ಲಕ್ಷ ರೂ. ವೆಚ್ಚದಲ್ಲಿ 60-15 ಅಡಿ ಉದ್ದಗಲ ಅಳತೆಯಲ್ಲಿ ಶೆಡ್ ನಿರ್ಮಿಸಿದ್ದಾರೆ. ಜನವರಿಯಲ್ಲಿ ತಲಾ ಒಂದು ಮರಿಗೆ 6 ಸಾವಿರ ರೂಪಾಯಿಯಂತೆ ಮೂರು ತಿಂಗಳ ನಾಟಿ ಮರಿಗಳನ್ನು ಖರೀದಿ ಮಾಡಿದ್ದಾರೆ.
ಶೇಂಗಾ ಹಿಂಡಿ, ಅಕ್ಕಿ ಮತ್ತು ರಾಗಿ ಹಿಟ್ಟು, ಮೆಕ್ಕೆಜೋಳ, ರಾಗಿ ಹುಲ್ಲು ಸೇರಿ ವಿವಿಧ ಪೌಷ್ಟಿಕ ಆಹಾರದ ಜತೆ ಉಪ್ಪು ಮಿಶ್ರಿತ ನೀರು ನೀಡಿ ಪಾಲನೆ ಮಾಡಿದ್ದಾರೆ. ಸ್ವಚ್ಛತೆ ಕಾಪಾಡಿಕೊಂಡು ಉತ್ತಮವಾಗಿ ಆರೈಕೆ ಮಾಡಿರುವ ಕಾರಣ ಟಗರು ಮರಿಗಳು ತಲಾ 23ರಿಂದ 25 ಕೆಜಿ ತೂಗುತ್ತಿದ್ದು, ಖರೀದಿದಾರರು ಕೊಳ್ಳಲು ಮುಗಿಬಿದ್ದಿದ್ದಾರೆ.
ತಾಲೂಕಿನ ಕೋನಸಾಗರ, ನೇರ‌್ಲಹಳ್ಳಿ, ಕೊಂಡ್ಲಹಳ್ಳಿ, ಉಡೇವು, ಚಿಕ್ಕುಂತಿ, ತುಮಕೂರ‌್ಲಹಳ್ಳಿ, ನಾಗಸಮುದ್ರ, ಉಚ್ಚಂಗಿದುರ್ಗ, ಸಂತೇಗುಡ್ಡ, ಬಾಂಡ್ರಾವಿ ಸೇರಿ ನಾನಾ ಗ್ರಾಮಗಳ ಹಲವು ರೈತರು 5ರಿಂದ ನೂರರ ತನಕ ಕುರಿಮರಿ ಸಾಕಣೆ ಮಾಡುತ್ತಿದ್ದಾರೆ.
ಹಿಂದಿನ ಸಂಪ್ರದಾಯದಂತೆ ಕುರಿ, ಮೇಕೆಗಳನ್ನು ಸಾಕಲು ನಾಲ್ಕಾರು ಜನ ಆಳು ಬೇಕಿತ್ತು. ಅಡಿವಿಯಲ್ಲಿ ಸಿಗುವ ಮೇವು-ನೀರೆ ಅನಿವಾರ್ಯತೆ ಇತ್ತು. ಆದರೆ, ಈಗ ಮನೆ ಅಕ್ಕಪಕ್ಕ ಅಥವಾ ಜಮೀನಿನಲ್ಲಿ ಶೆಡ್ ನಿರ್ಮಿಸಿಕೊಂಡು ಕುರಿ ಪಾಲನೆ ಮಾಡಬಹುದು ಎನ್ನುತ್ತಾರೆ ರೈತರು.
ಕೆ.ಜಗಲೂರಯ್ಯ ನೇರ‌್ಲಹಳ್ಳಿ ಹೇಳಿಕೆ: ಹಿಂದಿನ ಕಾಲದಿಂದ ಕುರಿ ಸಾಕಣೆ ಮಾಡುತ್ತಿದ್ದೇವೆ. ಅಡವಿಯಲ್ಲಿ ಮೇವು, ನೀರು ಸಿಗದ ಪರಿಸ್ಥಿತಿಯಿಂದ ಅವುಗಳನ್ನು ಕಾಪಾಡುವುದು ಕಷ್ಟ. ಆದರೂ ಮೂಲ ಕಸುಬು ಬಿಡಬಾರದೆಂದು 300ಕ್ಕೂ ಹೆಚ್ಚು ಕುರಿ ಪಾಲನೆ ಮಾಡುತ್ತಿದ್ದೇವೆ. ಕುರಿ ಗೊಬ್ಬರ ಜಮೀನಿಗಾಗುತ್ತೆ. ಕುರಿ ಸಾಕಣೆಯಿಂದ ಲಾಭವೇ ಹೊರತು ನಷ್ಟದ ಮಾತಿಲ್ಲ.
ಕುರಿ ಸಾಕಣೆದಾರ ಅಜ್ಜಣ್ಣ ನೇರ‌್ಲಹಳ್ಳಿ ಹೇಳಿಕೆ: ಕೊಳವೆಬಾವಿ ಸೌಲಭ್ಯ ಇರುವ ರೈತರು ಕುರಿಮರಿ ಸಾಕಣೆ ಮಾಡುವುದು ಸುಲಭ. ಉತ್ತಮ ಆಹಾರ ನೀಡಿ ಪಾಲನೆ ಮಾಡಿದರೆ ಲಾಭ ಗಳಿಸಲು ಸಾಧ್ಯ.