ಮೊಳಕಾಲ್ಮೂರು: ಕಲಿಕಾ ಹಬ್ಬವು ಮಕ್ಕಳ ಬೌದ್ಧಿಕ ಶಕ್ತಿ ವಿಕಸನಕ್ಕೆ ಉತ್ತಮ ವೇದಿಕೆ ಎಂದು ಬಿಇಒ ಕೆ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಹೊಮ್ಮಿಕೊಂಡಿದ್ದ ಪೂರ್ವವಲಯ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಸಮುದಾಯ, ಮಕ್ಕಳ ನಡುವೆ ಬೆರೆತು ಕಲಿಕೆಗೆ ಪ್ರೇರಣೆ ನೀಡುವ ಒಂದು ವಿನೂತನ ಪ್ರಯೋಗವೇ ಕಲಿಕಾ ಹಬ್ಬ. ಇಂತಹ ಚಟುವಟಿಕೆಗಳು ಸಮಗ್ರ ಶಿಕ್ಷಣಕ್ಕೆ ಪೂರಕ ಎಂದು ಹೇಳಿದರು.
ರಾಜ್ಯದ 35 ಜಿಲ್ಲೆಗಳ 4103 ಕ್ಲಸ್ಟರ್ ಮಟ್ಟದಲ್ಲಿ 45 ಸಾವಿರ ಶಾಲೆಗಳ 90 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವಿಕೆ ಸಂಭ್ರಮದ ವಿಚಾರ. ಇದರಲ್ಲಿ ಲಕ್ಷಕ್ಕೂ ಅಧಿಕ ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕಲಿಕಾ ಅನುಭವದ ಕೇಂದ್ರವಾಗಿಸುವ ಈ ವಿಧಾನವನ್ನು ಸಮುದಾಯದ ಕಣ್ಣೆದುರು ಮಗು ತನ್ನ ಬಾಲ್ಯ ಸಂಭ್ರಮಿಸಲು ಒಂದು ಮಹತ್ವದ ಪ್ರಯತ್ನವೇ ಕಲಿಕಾ ಹಬ್ಬ. ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಕಲಿಕೆಯ ಸಡಗರ ಉಂಟುಮಾಡಬಲ್ಲದು. ಸ್ಪರ್ಧೆ, ನಾಟಕ, ಚರ್ಚೆ, ಸಂವಾದ, ಪ್ರಯೋಗ, ಕಲೆಗಾರಿಕೆ, ವೀಕ್ಷಣೆ, ಪ್ರಯೋಗಗಳು ಪಾಲ್ಗೊಳ್ಳುವಿಕೆಯ ಚೈತನ್ಯ ತುಂಬುತ್ತವೆ ಎಂದು ಹೇಳಿದರು.
ನಾವು ಏಕಾಂಗಿಯಾಗಿ ಬದುಕಲಾರೆವು, ಕಲಿಯಲಾರೆವು ಕೂಡ. ಅನುಭವಾತ್ಮಕ ಕಲಿಕೆಯು ಪರಿಸರ ಮತ್ತು ವಿಧಾನಗಳು ಹಾಗೂ ಸಂವಿಧಾನದ ಆಶಯಗಳಾದ ಸಹಬಾಳ್ವೆ, ಸಹೋದರತೆ ಮುಂತಾದ ಮಾನವೀಯ ಮೌಲ್ಯ ಬೆಳೆಸುವ ಉದ್ದೇಶವಾಗಿದೆ. ಇದು ಮಕ್ಕಳ ಪಾಲಿಗೆ ಅತ್ಯಂತ ದೊಡ್ಡ ಹಬ್ಬವಾಗಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು.
ಉಪ ಪ್ರಾಚಾರ್ಯ ಎ.ರಾಜಣ್ಣ, ಇಸಿಒ ಓಂಕಾರಪ್ಪ, ಶಿಕ್ಷಕರಾದ ಟಿ.ಎಂ.ಕಲ್ಲೇಶ್, ತಿಪ್ಪೇಸ್ವಾಮಿ, ಮೊಹನ್, ಗಂಗಾರೆಡ್ಡಿ, ಎಸ್.ಬೋರಮ್ಮ, ವಿ.ಸುಮಾ, ಶಿವರುದ್ರಮ್ಮ, ಏಕಾಂತಪ್ಪ, ವೀರೇಶ್, ನಾಗಭೂಷಣ ರೆಡ್ಡಿ, ರವಿಕುಮಾರ, ಅಶೋಕ್, ತಿಪ್ಪಮ್ಮ ಇತರರಿದ್ದರು.
ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಶಿಕ್ಷಣದ ಜತೆಗೆ ಹೊರ ಜಗತ್ತಿನ ಅನುಭವ ಪಡೆಯಬೇಕೆಂಬ ಅಪೇಕ್ಷೆಯಲ್ಲಿ ಖುಷಿಯಿಂದ ಪಾಲ್ಗೊಳ್ಳಲು ಉತ್ತೇಜಿಸಲಾಗಿದೆ. ವಿದ್ಯಾರ್ಥಿಗಳು ಗುಂಪುಗಳಾಗಿ ಪರಸ್ಪರ ಬೆರೆತು ತಾರ್ಕಿಕ ಆಲೋಚನೆ ಮಾಡಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ತಾವೇ ಕಂಡುಕೊಳ್ಳುವುದು. ಕೌಶಲ, ಜ್ಞಾನ ಸಂಪಾದನೆಗೆ ಸಹಕಾರಿಯಾಗಿದೆ. ಸಿದ್ದಪ್ಪ ಬಿಆರ್‌ಪಿ