ಜಿಲ್ಲೆ

ಪ್ರಕೃತಿ ಸಂಪತ್ತಿನ ರಕ್ಷಣೆ ಸರ್ವರ ಹೊಣೆ

Chitradurga

ಮೊಳಕಾಲ್ಮೂರು: ಪ್ರಕೃತಿ ಸಂಪತ್ತನ್ನು ನಾಶ ಮಾಡುವ ಪ್ರವೃತಿ ನಿಲ್ಲದಿದ್ದರೆ ಜೀವ ಸಂಕುಲಕ್ಕೆ ಕುತ್ತು ಖಚಿತ ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ರಕ್ಷಣೆ ಸರ್ಕಾರ, ಸಂಘಗಳ ಹೊಣೆ ಆಗದೇ ಸಾಮಾಜಿಕ ಜವಾಬ್ದಾರಿ ಆಗಬೇಕು. ಪ್ರತಿ ವ್ಯಕ್ತಿ ಕಾಳಜಿ ವಹಿಸಬೇಕು ಎಂದರು.

ಜಗತ್ತು ಬೆಳೆದಂತೆ ಆಧುನಿಕ ಜೀವನ ಶೈಲಿಯಿಂದ ಸಮೃದ್ಧವಾಗಿದ್ದ ಕಾಡು ನಾಶವಾಗುತ್ತಿದೆ. ಇದರ ದುಷ್ಪರಿಣಾಮದಿಂದ ತಿನ್ನುವ ಆಹಾರ, ನೀರು, ಗಾಳಿ ವಿಷಯುಕ್ತವಾಗಿದೆ. ಭೂಮಿ ಮೇಲೆ ಬದುಕುವ ಜೀವ ರಾಶಿಗಳ ಪ್ರಾಣಕ್ಕೆ ಕುತ್ತು ತಂದಿದೆ. ಇದರಿಂದ ಪಾರಾಗಲು ಅರಣ್ಯ ಸಂಪತ್ತಿನ ಸೃಷ್ಟಿಯಾಗಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ಸಂಕಲ್ಪ ಕೇವಲ ಸಭೆ, ಸಮಾರಂಭಗಳಿಗೆ ಸೀಮಿತವಾಗಿರಬಾರದು. ಈ ಕಾರಣಕ್ಕೆ ಅರಿವು ಮೂಡಿಸಲಾಗುತ್ತಿದೆ ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಮಂಜುನಾಥ, ಸಹ ಕಾರ್ಯದರ್ಶಿ ಕುಮಾರಪ್ಪ, ಮಾಜಿ ಅಧ್ಯಕ್ಷ ಪಿ.ಜಿ.ವಸಂತಕುಮಾರ, ವಕೀಲರಾದ ಅನಂತಮೂರ್ತಿ, ವಿಜಯಲಕ್ಷ್ಮಿ, ಸುರೇಶ್ ಇತರರಿದ್ದರು.