ಜಿಲ್ಲೆ

15 ಮಂದಿ ಕೂಲಿಗಾರರಿಗೆ ಕ್ವಾರೆಂಟೈನ್

ಮೊಳಕಾಲ್ಮೂರು: ಹಾಸನಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದವರು ತಾಲೂಕಿನ ರಾಯಾಪುರದ ಸುಡುಗಾಡುಸಿದ್ದರ ವಠಾರಕ್ಕೆ ಆಗಮಿಸಿದ 15 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪ್ರತ್ಯೇಕ ಇರಿಸಲಾಗಿದೆ.

ಭಾನುವಾರ ಬೆಳಗ್ಗೆ ಟಾಟಾ ಎಸಿಯಲ್ಲಿ ವಾಪಸ್ಸು ಊರಿಗೆ ಬಂದವರನ್ನು ಸ್ಥಳೀಯರು ಅವರನ್ನು ವಠಾರದೊಳಗೆ ಬಿಟ್ಟುಕೊಂಡಿರಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಬಸವರಾಜ್, ಇಒ ಪ್ರಕಾಶ್ ಅವರೆಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆರೋಗ್ಯವಾಗಿದ್ದಾರೆ ಎಂದು ಖಚಿತ ಪಡಿಸಿದರು. ಜತೆಗೆ ಸಮೀಪದ ರೇಷ್ಮೆ ಫಾರಂ ಕೊಠಡಿಗಳಲ್ಲಿ 15 ದಿನಗಳವರೆಗೆ ಇರುವಂತೆ ಸೂಚಿಸಿ ಊಟ, ವಸತಿ ವ್ಯವಸ್ಥೆ ಮಾಡಿದರು.

ಊರಿಗೆ ವಾಪಸ್ಸು ಬಂದ ಅಲೆಮಾರಿ ಸಮುದಾಯದವರಿಗೆ 15 ದಿನಗಳವರೆಗೆ ಊಟಕ್ಕಾಗಿ ಅಡುಗೆ ಎಣ್ಣೆ, ಸಾಂಬಾರು ಸೇರಿ ಇತರೆ ವ್ಯವಸ್ಥೆ ಮಾಡುವುದಾಗಿ ಮೊಳಕಾಲ್ಮೂರಿನ ವರ್ತಕರ ಸಂಘದವರು ತಿಳಿಸಿದ್ದಾರೆ ಎಂದು ಇಒ ಪ್ರಕಾಶ್ ಮಾಹಿತಿ ನೀಡಿದರು.