ಜಿಲ್ಲೆ

ಕೃಷಿಗೆ ಜೀವಸೆಲೆಯಾಗಿದ್ದ ಗುಂಡ್ಲೂರು ಕೆರೆಗೆ ಅಸ್ತಿತ್ವದ ಭೀತಿ

ಮೊಳಕಾಲ್ಮೂರು: ತಾಲೂಕಿನ ಗುಂಡ್ಲೂರು ಗ್ರಾಮದಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಾಣವಾಗಿದ್ದ ಕೆರೆ ನೂರಾರು ವರ್ಷಗಳವರೆಗೆ ಸುತ್ತಮುತ್ತ ತೋಟಗಳು ಹಾಗೂ ಕೃಷಿ ಭೂಮಿಗೆ ಜೀವಸೆಲೆಯಾಗಿತ್ತು. ಆದರೆ ಇಂದು ನಿರ್ವಹಣೆ ಕೊರತೆ ಕಾರಣಕ್ಕೆ ತನ್ನ ಮೂಲ ಸ್ವರೂಪ ಕಳೆದುಕೊಂಡಿದೆ.

ಕೃಷಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 200 ವರ್ಷಗಳ ಹಿಂದೆ ಕೆರೆ ನಿರ್ಮಾಣ ಮಾಡಿದ್ದು, 60 ಎಕರೆ ವಿಸ್ತೀರ್ಣವಿದೆ. ಇದು ಚಿಕ್ಕದಾದರೂ ತನ್ನ ಒಡಲಲ್ಲಿ ಸಮೃದ್ಧ ನೀರು ಹೊಂದಿ ಹಲವು ವರ್ಷಗಳವರೆಗೆ ನೂರಾರು ಎಕರೆಗೆ ನೀರು ಉಣಿಸಿತ್ತು. ಆದರೆ ಯಾವುದೇ ಜಲಮೂಲಗಳಿಗೆ ಸಂಪರ್ಕ ಹೊಂದಿರದ ಕಾರಣ ಬಡವಾಗಿದೆ.

ಮಳೆಗಾಲದಲ್ಲಿ ಆಂಧ್ರದ ಅರಣ್ಯ ಪ್ರದೇಶದಿಂದ ಬರುವ ನೀರನ್ನೇ ಆಶ್ರಯಿಸಿದ್ದ ಕೆರೆ ಗುಂಡ್ಲೂರು, ನೇರ‌್ಲಹಳ್ಳಿ, ಸೂಲೇನಹಳ್ಳಿ, ರಾಯಾಪುರ, ಮರ‌್ಲಹಳ್ಳಿ ಹಾಗೂ ಮೊಳಕಾಲ್ಮೂರು ಭಾಗದ ತೋಟ ಹಾಗೂ ಕೃಷಿಗೆ ಜೀವನಾಡಿಯಾಗಿತ್ತು. ಕಳೆದ 15 ವರ್ಷಗಳಿಂದ ಭರ್ತಿಯಾಗದ ಕಾರಣ ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೆಲವರು ತೋಟಗಾರಿಕೆ ಬಳಿಯಿಂದ ಹಿಂದೆ ಸರಿದಿದ್ದಾರೆ.

ಸಂರಕ್ಷಣೆ ಬಗ್ಗೆ ಇಲ್ಲ ಕಾಳಜಿ

ಕೆರೆಗೆ ಸುಭದ್ರವಾದ ಏರಿ ಇಲ್ಲ. ಇದರಿಂದ ಅರ್ಧ ಕೆರೆ ತುಂಬಿದರೆ ಸಾಕು ನೀರು ಪೋಲಾಗುತ್ತದೆ. ಜತೆಗೆ ಕೆರೆ ತುಂಬ ಜಾಲಿ ಗಿಡಗಳು ಬೆಳೆದಿದ್ದು, ಸುತ್ತಲೂ ಒತ್ತುವರಿಯಾಗಿದೆ. ಇದರ ನಿರ್ವಹಣೆ ಜವಾಬ್ದಾರಿ ಹೊಂದಿರುವ ಜಿಪಂ ಇಂಜಿನಿಯರಿಂಗ್ ವಿಭಾಗವು ರಕ್ಷಣೆ ಕುರಿತು ಗಮನಹರಿಸಿಲ್ಲ ಎಂಬುದು ಸ್ಥಳೀಯರ ದೂರು.

ಕೆರೆ ಮೇಲ್ಭಾಗದ ಅಲ್ಲಲ್ಲಿ ಚೆಕ್‌ಡ್ಯಾಂ ಕಟ್ಟಿರುವ ಕಾರಣ ನೀರು ಹರಿದು ಬರುವುದು ತೀರಾ ಕಡಿಮೆಯಾಗಿದೆ. ಆಂಧ್ರದ ಅರಣ್ಯ ಪ್ರದೇಶದ ಕಡೆ ಹರಿಯುವ ಮಳೆ ನೀರನ್ನು ಈ ಕಡೆ ತಿರುಗಿಸಿದರೆ ವರ್ಷಪೂರ್ತಿ ಕೆರೆ ಭರ್ತಿಯಾಗುವ ಸಾಧ್ಯತೆ ಇದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಗುಂಡ್ಲೂರು ಕೆರೆ ಎತ್ತರದ ಪ್ರದೇಶದಲ್ಲಿದೆ. ಭದ್ರಾ ಮೇಲ್ದಂಡೆಯಿಂದ ನೀರು ಹರಿಸಲು ಪೈಪ್‌ಲೈನ್ ಅಳವಡಿಸಲು ಹೆಚ್ಚು ವೆಚ್ಚವಾಗುತ್ತದೆ ಎಂದು ಹೇಳಿ ಅಭಿವೃದ್ಧಿ ಕಾರ್ಯ ಕೈಬಿಡುವ ಹುನ್ನಾರ ನಡೆದಿತ್ತು. ಸಚಿವ ಶ್ರೀರಾಮುಲು ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಮೇಲೆ ಒತ್ತಡ ಹಾಕಿದ್ದರಿಂದ ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದು ಸಾಕಾರವಾಗಬೇಕಿದೆ. -ಮರ‌್ಲಹಳ್ಳಿ ರವಿಕುಮಾರ್ ಮುಖಂಡಎರಡು ವರ್ಷಗಳ ಹಿಂದೆ ಕೆರೆ ಏರಿ ಒಳಭಾಗದಲ್ಲಿ ನೀರು ಸೋರಿಕೆ ತಡೆಗೆ ದುರಸ್ತಿ ಕಾರ್ಯ ಮಾಡಿಸಲಾಗಿತ್ತು. ಮತ್ತೆ ಸರ್ಕಾರದಿಂದ ಅನುದಾನ ಬಂದಿಲ್ಲ. ಜಿಪಂ ವ್ಯಾಪ್ತಿಯಲ್ಲಿರುವ ಸಣ್ಣ ಕೆರೆಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಕಳೆದ 6 ತಿಂಗಳ ಹಿಂದೆ ಸ್ಥಳೀಯ ಗ್ರಾಪಂ ಆಡಳಿತಕ್ಕೆ ಹಸ್ತಾಂತರ ಮಾಡಲಾಗಿದೆ.-ತಿಪ್ಪೇಸ್ವಾಮಿ ಜಿಪಂ ಇಂಜಿನಿಯರ್ ವಿಭಾಗನಮ್ಮೂರ ಕೆರೆ ಸಂರಕ್ಷಣೆ ಮಾಡುವಂತೆ ಅಧಿಕಾರಿಗಳ ಬಳಿ ಹಲವು ಬಾರಿ ಅಂಗಲಾಚಿದ್ದೇವೆ. ಅನುದಾನದ ಕೊರತೆಯ ನೆಪ ಹೇಳಿ ನುಣುಚಿಕೊಳ್ಳುತ್ತಾರೆ. ಕೆರೆ ಮೇಲ್ಭಾಗದ ಅಡವಿಯಿಂದ ಮಳೆ ನೀರನ್ನು ಸುಲಭವಾಗಿ ಹರಿಸುವ ಮಾರ್ಗ ಇದೆ. ಅದು ಸಾಕಾರಗೊಂಡರೆ ಕೆರೆಯಲ್ಲಿ ಸಮೃದ್ಧ ನೀರು ಕಾಣಬಹುದು.- ಬೆಳಗಲ್ ಈಶ್ವರಯ್ಯಸ್ವಾಮಿ ರೈತ ಸಂಘದ ತಾಲೂಕು ಅಧ್ಯಕ್ಷ

ಮೊಳಕಾಲ್ಮೂರು, ಗುಂಡ್ಲೂರು ಕೆರೆ, ಕೃಷಿ, molakalmuru, Gundlur kere, Agriculture,