ಜಿಲ್ಲೆ

ತಾಪಂ ಅನುದಾನ ವಾಪಸ್‌ಗೆ ಅಸಮಾಧಾನ

Chitradurga

ಮೊಳಕಾಲ್ಮೂರು: ತಾಪಂಗೆ ಬರುವ ಅಲ್ಪ ಅನುದಾನದಲ್ಲಿ 50 ಲಕ್ಷ ರೂ. ಹಣ ಕಡಿತವಾಗಿರುವುದು ಅನ್ಯಾಯ. ಕೂಡಲೇ ಪೂರ್ಣ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸರ್ವ ಸದಸ್ಯರು ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಒತ್ತಾಯಿಸಿದರು.

ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮಂಜೂರಾದ ಅನುದಾನದಲ್ಲಿ ಕಡಿತವಾಗಿದೆ. ಇದಕ್ಕೆ ಅಧಿಕಾರಿಗಳೇ ಹೊಣೆ. ಪೂರ್ಣಗೊಂಡ ಕೆಲಸಗಳ ಬಿಲ್ ಅನ್ನು ಸಕಾಲಕ್ಕೆ ಟ್ರೆಜರಿಗೆ ಒದಗಿಸಿದ್ದರೆ ಹಣ ವಾಪಸ್ ಹೋಗುತ್ತಿರಲಿಲ್ಲ ಎಂದು ಸದಸ್ಯರು ಅಸಮಾಧಾನ ಹೊರಹಾಕಿದರು. ಅನುದಾನ ವಾಪಸ್ ತರಿಸಲು ಸರ್ಕಾರಕ್ಕೆ ಪತ್ರ ಬರೆಯುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಇಒ ಪ್ರಕಾಶ್ ಮಾತನಾಡಿ, ತಾಪಂ ಸೇರಿ ಎಲ್ಲ ಇಲಾಖೆಗಳಲ್ಲಿ 6.50 ಕೋಟಿ ರೂ.ಗಳ ಬಿಲ್ ಅನ್ನು ಮಾ.23ರಂದು ಸಲ್ಲಿಸಲಾಗಿದೆ. ಆದರೆ ಮರು ದಿನವೇ ಟ್ರೆಜರಿ ಲಾಕ್ ಆಗಿದೆ. ಇದು ನಮ್ಮ ಕೈಯಲ್ಲಿ ಇಲ್ಲ ಎಂದರು.

ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರಿದೆ. ಆರ್‌ಒ ಪ್ಲಾಂಟ್ ಸಮರ್ಪಕ ಕೆಲಸ ಮಾಡುತ್ತಿಲ್ಲ. ನಿರ್ವಹಣೆ ಹೊತ್ತ ಏಜೆನ್ಸಿಯವರು ಸ್ಪಂದಿಸದಿದ್ದರೆ ನೋಟಿಸ್ ನೀಡಬೇಕು. 15 ದಿನಗಳಲ್ಲಿ ನೀರಿನ ಸಮಸ್ಯೆ ಪರಿಹಾರವಾಗಬೇಕು ಎಂದು ಇಒ ಅವರು ಎಇಇ ಎಂ.ಪವಾರ್ ಅವರಿಗೆ ತಾಕೀತು ಮಾಡಿದರು.

ಮೊಳಕಾಲ್ಮೂರು, ಬಿಜಿಕೆರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ಹೆರಿಗೆ, ಅಪಘಾತ ನಡೆದ ಸಂದರ್ಭದಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಈ ಕುರಿತು ಗಮನ ಹರಿಸಬೇಕು ಎಂದು ಟಿ.ರೇವಣ್ಣ, ಎ.ಕೆ.ಮಂಜುನಾಥ ಒತ್ತಾಯಿಸಿದರು.

ತೋಟಗಾರಿಕೆ ಅಧಿಕಾರಿ ಲೋಕೇಶ್ ಮಾತನಾಡಿ, 2016-17 ನೇ ಸಾಲಿನಲ್ಲಿ ಬರದಿಂದ ನಷ್ಟವಾದ 2578 ತೆಂಗಿನ ಮರಗಳಿಗೆ ತಲಾ 400 ರೂ. ನಂತೆ 88 ರೈತರಿಗೆ 10 ಲಕ್ಷ ಪರಿಹಾರದ ಹಣ ಬಂದಿದೆ. ಉಳಿದಂತೆ 2.44 ಕೋಟಿ ಬರಬೇಕಿದೆ ಎಂದರು.

ತಾಲೂಕಿನ ವಿವಿಧೆಡೆ ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸೇವೆಯ ಕಟ್ಟಡಗಳಿಗೆ ಮಂಜೂರಾದ 1.86 ಕೋಟಿ ರೂ. ಮಂಜೂರಾಗಿದ್ದು, 78 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಜಿಪಂ ಉಪ ವಿಭಾಗದ ಎಇ ತಿಪ್ಪೇಸ್ವಾಮಿ ತಿಳಿಸಿದರು.

ತಾಪಂ ಅಧ್ಯಕ್ಷೆ ಜಿ.ಬೋರಮ್ಮ, ಉಪಾಧ್ಯಕ್ಷೆ ಚನ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ವೀರೇಶ್, ಸದಸ್ಯರಾದ ನರೇಂದ್ರಬಾಬು, ಬಸಮ್ಮ, ತಿಮ್ಮಕ್ಕ, ತಾಪಂ ವ್ಯವಸ್ಥಾಪಕ ನಂದೀಶ್ ಇದ್ದರು.