ಮೊಳಕಾಲ್ಮೂರು: ವಿದ್ಯಾವಂತ ಯುವ ಸಮೂಹ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕೆಂಬುದು ಕೌಶಲಾಭಿವೃದ್ಧಿ ಯೋಜನೆಯ ಆಶಯ ಎಂದು ಕೌಶಲಾಭಿವೃದ್ಧಿ ಯೋಜನೆ ಜಿಲ್ಲಾ ಉಪ ನಿರ್ದೇಶಕ ಬಿ.ಸುರೇಶ್ ಹೇಳಿದರು.
ಕೌಶಲಾಭಿವೃದ್ಧಿ, ಜೀವನೋಪಾಯ, ಉದ್ಯಮಶೀಲತೆ ಇಲಾಖೆಯಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪ್ರಪಂಚದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸವಾಲಿನ ಕೆಲಸ. ಯಶಸ್ಸಿನ ಹಾದಿಯಲ್ಲಿ ಸಾಗಲು ನೈತಿಕ ಆತ್ಮಬಲ ಮುಖ್ಯ. ವಿವಿಧ ಕ್ಷೇತ್ರಗಳಲ್ಲಿ ಕೌಶಲ ಸಾಧಿಸಿದರೆ ಯಶಸ್ಸು ಸಾಧಿಸಬಹುದು ಎಂದರು.
ಹಾನಗಲ್‌ನ ಕೈಗಾರಿಕೆ ತರಬೇತಿ ಕೇಂದ್ರದ ಪ್ರಾಂಶುಪಾಲ ಟಿ.ತಿಮ್ಮಣ್ಣ ಮಾತನಾಡಿ, ಸರ್ಕಾರಿ ನೌಕರಿ ಆಸೆಗಾಗಿ ಓದುವ ಹುಚ್ಚು ಸಲ್ಲದು. ಸೋಮಾರಿತನ ಹೊಟ್ಟೆ ತುಂಬಿಸುವುದಿಲ್ಲ. ಕಲಿತ ವಿದ್ಯೆಗೆ ತಕ್ಕನಾದ ದುಡಿಮೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಡಿ.ಸೂರಯ್ಯ ಮಾತನಾಡಿ, ಇನ್ನೊಬ್ಬರ ಅವಲಂಬಿಸಿ ಜೀವನ ನಡೆಸುವುದು ಶಾಶ್ವತವಲ್ಲ. ಇದಕ್ಕೆ ಸಮಾಜವು ಸಹಿತ ಗೌರವ ಕೊಡುವುದಿಲ್ಲ. ವಿದ್ಯಾವಂತ ಯುವಜನತೆ ತಮ್ಮಲ್ಲಿರುವ ಯುಕ್ತಿ ಬಳಸಿ ಜೀವನವೆಂಬ ಪಯಣದಲ್ಲಿ ಸಾರ್ಥಕತೆ ಸಾಧಿಸಬೇಕು ಎಂದರು.
ಕಿರಿಯ ತರಬೇತಿ ಅಧಿಕಾರಿಗಳಾದ ಆಯಾಜ್ ಅಹಮದ್, ತಿಮ್ಮಣ್ಣ, ಬಿ.ಸತೀಶ್, ಕಿಶೋರ್, ಸಹಾಯಕ ಸಾಂಖಿಕ ಅಧಿಕಾರಿ ಟಿ.ವೇಮಣ್ಣ, ಉಪನ್ಯಾಸಕರಾದ ಸುಮಂಗಲಾ, ಓಬಣ್ಣ, ಸುಮಾ ಇದ್ದರು.