ಮೊಳಕಾಲ್ಮೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗ ಅನುಸರಿಸುತ್ತ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಬದ್ಧತೆ ತೋರಬೇಕು ಎಂದು ಕಾಂಗ್ರೆಸ್ ಮುಖಂಡ ಡಾ.ಯೋಗೇಶ್ ಬಾಬು ಹೇಳಿದರು.
ಪಟ್ಟಣದ ಗುರುಭವನದಲ್ಲಿ ಗೌತಮ ಬುದ್ಧ ಪ್ರತಿಷ್ಠಾನ, ರಂಗಾಯಣ, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸೂತ್ರಧಾರ ಭಾರತದ ಸಂವಿಧಾನ ಚರಿತ್ರೆ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಹಾಗಾಗಿ ಭಾರತದ ಪ್ರತಿ ಪ್ರಜೆಯೂ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹಕ್ಕು ಪ್ರತಿಪಾದಿಸುವ ಮೂಲಕ ಘನತೆ, ಗೌರವ, ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಸರ್ವ ಧರ್ಮಿಯರ ಸಮಗ್ರತೆ ಮತ್ತು ಐಕ್ಯತೆಗಾಗಿ ವಿಶ್ವ ಮಾನ್ಯತೆ ಪಡೆದಿದೆ ಎಂದು ಹೇಳಿದರು.
ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಭಾರತದ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವಲ್ಲಿ ಬಾಬಾಸಾಹೇಬರು ಪ್ರಜಾತಂತ್ರ ವ್ಯವಸ್ಥೆಗೆ ಅಡಿಗಲ್ಲಾಗಿದ್ದಾರೆ ಎಂದರು.
ಅವರ ದೂರದೃಷ್ಟಿ ಚಿಂತನೆಯಿಂದಾಗಿ ಮುಂದುವರಿದ ದೇಶಗಳೊಂದಿಗೆ ಭಾರತವೂ ಪ್ರಬಲ ಪೈಪೋಟಿವೊಡ್ಡುವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಅತಶಯೋಕ್ತಿ ಅಲ್ಲ. ಅದು ನಮ್ಮ ಹೆಗ್ಗಳಿಕೆ ಎಂದು ಹೇಳಿದರು.
ಸಾಹಿತಿ, ಪ್ರೊ. ಡಾ.ವಿರೂಪಾಕ್ಷ ಪೂಜಾರಹಳ್ಳಿ, ಪ್ರಾಂಶುಪಾಲ ಗೋವಿಂದಪ್ಪ, ಕಸಾಪ ತಾಲೂಕು ಅಧ್ಯಕ್ಷ ಜಿಂಕಾ ಶ್ರೀನಿವಾಸ, ಸಿಪಿಐ ಸತೀಶ್, ಪಿಎಸ್‌ಐ ಪಾಂಡುರಂಗಪ್ಪ, ಪಶು ವ್ಯದ್ಯಾಧಿಕಾರಿ ಡಾ.ರಂಗಪ್ಪ, ಸಮಾಜ ಕಲ್ಯಾಣಾಧಿಕಾರಿ ಮಾಲತಿ, ಬಿ.ಪಿ.ಪ್ರೇಮಕುಮಾರ, ಬಿ.ವಿಜಯ್, ಯೋಗಾನಂದ, ಉಪನ್ಯಾಸಕ ಬಿ.ಎನ್.ತಿಪ್ಪೇಸ್ವಾಮಿ, ವಕೀಲ ಮಂಜುನಾಥಸ್ವಾಮಿ, ಪರಮೇಶ, ಸಣ್ಣಯಲ್ಲಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು. ಡಾ. ಅಂಬೇಡ್ಕರ್ ಅವರ ಸಂವಿಧಾನ ಪರಿಕಲ್ಪನೆ ಚರಿತ್ರೆ ಕುರಿತು ಮೈಸೂರಿನ ರಂಗಾಯಣ ಕಲಾವಿದರು ನಾಟಕ ಪ್ರದರ್ಶಿಸಿದರು.
ಕಾನೂನು ಪಾಂಡಿತ್ಯದಲ್ಲಿ ವಿಶ್ವ ಗುರು ಮನ್ನಣೆ ಪಡೆದ ಭಾರತದ ಶಾಸನ ಪಾವಿತ್ರೃತೆ ಪಡೆದುಕೊಂಡಿದೆ. ವಿದ್ಯಾರ್ಥಿ ಸಮೂಹ ಕಾನೂನು ಪರಿಣಿತಿ, ಪಾಲನೆಯಲ್ಲಿ ಪ್ರಜ್ಞಾವಂತಿಕೆ ತೋರಬೇಕು. ನಾಗರಿಕ ಸಮಾಜ ಕಟ್ಟುವ ನಾಯಕತ್ವದ ಗುಣಗಳನ್ನ ಬೆಳೆಸಿಕೊಳ್ಳಬೇಕು.
ಕೆ.ಜೆ.ವಿಜಯಲಕ್ಷ್ಮೀ ಪ್ರೇರಣಾ ಸಂಸ್ಥೆ ಸಂಸ್ಥಾಪಕಿ.