ಮೊಳಕಾಲ್ಮೂರು: ಚಿಕ್ಕೇರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬಡವರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಸೋಮವಾರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಚಿಕ್ಕೇರಹಳ್ಳಿ ಗ್ರಾಪಂ ವ್ಯಾಪ್ತಿಯ ಭಟ್ರಹಳ್ಳಿ, ಅಮುಕುಂದಿ, ಭೈರಾಪುರ, ಚಿಕ್ಕೇರಹಳ್ಳಿ ಗ್ರಾಮಗಳ ನಿವಾಸಿಗಳಲ್ಲಿ ಬಡತನ ಕಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಕಾರಣ ಸ್ವಂತ ಸೂರಿಲ್ಲದೆ ಗುಡಿ, ಬೇರೆಯವರ ವಠಾರದಲ್ಲಿ ಜೀವನ ನಡೆಸುತ್ತಿದ್ದಾರೆ.
ಈ ಹಳ್ಳಿಗಳಲ್ಲಿ ಸರ್ವೆ ಮೂಲಕ 138 ಕುಟುಂಬಗಳನ್ನು ಗುರುತಿಸಿ, ಇವರಿಗೆ ಆಯಾ ಪ್ರದೇಶದಲ್ಲಿ ನಿವೇಶನ, ವಸತಿ ಕಲ್ಪಿಸುವಂತೆ 2014ರಲ್ಲಿ ದಾಖಲಾತಿ ಸಹಿತ ತಾಪಂ, ಗ್ರಾಪಂಗೆ ನೀಡಲಾಗಿತ್ತು. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗ್ರಾಮೀಣ ಜನರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ಗ್ರಾಮಾಡಳಿತ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದನ್ನು ಕೈಬಿಟ್ಟು ನೊಂದವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕಾರ್ಯಕ್ಕೆ ಒತ್ತುಕೊಡಬೇಕು ಎಂದು ಆಗ್ರಹಿಸಿದರು.
ಪಿಡಿಒ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು. ಸಿಪಿಐ ಕಾರ್ಯದರ್ಶಿ ಜಾಫರ್, ಡಿ.ಪೆನ್ನಯ್ಯ, ಈರಣ್ಣ, ಮೂರ್ತಿ, ದುರುಗೇಶಿ, ಕಾಮಯ್ಯ, ಬೋರಯ್ಯ, ಮಹಾದೇವಿ, ನೇತ್ರವಾತಿ, ಲಕ್ಷ ್ಮಕ್ಕ, ತಿಪ್ಪೇಸ್ವಾಮಿ, ಸನಾವುಲ್ಲಾ ಇತರರಿದ್ದರು.