ಮೊಳಕಾಲ್ಮೂರು: ಮಹಾಮಾರಿ ಕರೊನಾ ವೈರಸ್ ತಡೆಗೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನು ಜನ ಒಪ್ಪಿಕೊಂಡಿದ್ದಾರೆ.
ತಾಲೂಕಿನ ಬಹುತೇಕ ಹಳ್ಳಿಗರು ತಮ್ಮೂರಿನ ದ್ವಾರ ಬಾಗಿಲ ರಸ್ತೆಗಳನ್ನು ಬಂದ್ ಮಾಡಿ ಗ್ರಾಮದಿಂದ ಹೊರ ಮತ್ತು ಒಳ ಬರುವವರಿಗೆ ಸ್ವಯಂ ನಿರ್ಬಂಧ ವಿಧಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ.
ಸಿಪಿಐ ಗೋಪಾಲನಾಯ್ಕ, ಪಿಎಸ್‌ಐಗಳಾದ ಎಂ.ಬಸವರಾಜ್ ಹಾಗೂ ಗುಡ್ಡಪ್ಪ ನೇತೃತ್ವದ ತಂಡ ಪ್ರತಿ ಹಳ್ಳಿಗಳಲ್ಲಿ ಗಸ್ತು ತಿರುಗಿ ಕಾಲಮಿತಿಯಲ್ಲಿಯೇ ಅಗತ್ಯ ವಸ್ತು ಖರೀದಿಸಿ ಮನೆಗೆ ಮರಳುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಎಲ್ಲ ಜಾತ್ರೆ, ಧಾರ್ಮಿಕ ಕಾರ್ಯಗಳನ್ನು ರದ್ದುಗೊಳಿಸಿ ಎಲ್ಲೂ ಜನ ಸಂದಣಿ ಸೇರದಂತೆ ಕ್ರಮ ಕೈಗೊಂಡಿದ್ದಾರೆ.
ಸ್ವಚ್ಛತೆಗೆ ಆದ್ಯತೆ: ಪ್ರತಿ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳ ಶುಚಿತ್ವ ಕಾಪಾಡಲು ಮತ್ತು ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಆಯಾ ಪಂಚಾಯಿತಿಗಳಿಗೆ ಸೂಚಿಸಲಾಗಿದೆ ಎಂದು ತಾಪಂ ಇಒ ಪ್ರಕಾಶ್ ತಿಳಿಸಿದ್ದಾರೆ.