ಮೊಳಕಾಲ್ಮೂರು: ಸಾಮಾಜಿಕ ಪಿಡುಗುಗಳ ನಿಯಂತ್ರಣಕ್ಕೆ ಶಿಕ್ಷಣ ಮತ್ತು ಕಾನೂನು ಜ್ಞಾನ ಅತ್ಯಗತ್ಯ ಎಂದು ಸಿವಿಲ್ ನ್ಯಾಯಾಧೀಶೆ ಎಸ್. ನಿರ್ಮಲಾ ಹೇಳಿದರು.
ತಾಲೂಕಿನ ತುಮಕೂರ‌್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಮಂಗಳವಾರ ಜಿಲ್ಲೆ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕೌಟುಂಬಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರಿಗೂ ಶಿಕ್ಷಣ, ಕಾನೂನು ಜ್ಞಾನ ದೊರೆತರೆ ಕೌಟುಂಬಿಕ ಕಲಹ, ಬಾಲ್ಯ ವಿವಾಹ, ಕಂದಾಚಾರ, ಮೂಢ ನಂಬಿಕೆ, ಬಾಲ ಕಾರ್ಮಿಕ ಪದ್ಧತಿ ಇತ್ಯಾದಿ ಸಾಮಾಜಿಕ ಪಿಡುಗುಗಳ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪಿ. ಪಾಪಯ್ಯ ಮಾತನಾಡಿ, ಪಾಲಕರು ಹಣ, ಆಸ್ತಿ ಆಸೆಗೆ ಬಿದ್ದು ಮಕ್ಕಳ ಬದುಕು ಹಾಳು ಮಾಡಬಾರದು. ಉನ್ನತ ಶಿಕ್ಷಣ ಕೊಡಿಸಿ ಕುಟುಂಬದ ಭದ್ರತೆ ಜತೆಗೆ ಸಮಾಜ ಸುಧಾರಣೆಗೆ ಅಣಿಗೊಳಿಸಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಕಾರ್ಯದರ್ಶಿ ಜಿ. ಮಂಜುನಾಥ ಮಾತನಾಡಿ, ಮನೆ ಮತ್ತು ಮನಃಶಾಂತಿಗೆ ಅತ್ತೆ, ಸೊಸೆಯಂದಿರ ಮಧ್ಯೆ ಉತ್ತಮ ಬಾಂಧವ್ಯ ಬೆಸೆಯಬೇಕು. ಈ ಕಾರ್ಯ ಯಾವ ಮನೆಯಲ್ಲಿ ಸಾಧ್ಯವಾಗುತ್ತದೆಯೋ ಅಂತಹ ಮನೆಯಲ್ಲಿ ಸದಾ ನೆಮ್ಮದಿ ಇರುತ್ತದೆ. ಕುಟುಂಬ ಸದಸ್ಯರೆಲ್ಲರೂ ಹೊಂದಾಣಿಕೆಯಿಂದಿದ್ದರೆ ಕೌಟುಂಬಿಕ ಕಲಹಗಳಿಗೆ ಜಾಗವೇ ಇರುವುದಿಲ್ಲ ಎಂದರು.
ಗ್ರಾಪಂ ಸದಸ್ಯ ರಾಜಣ್ಣ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯಶಿಕ್ಷಕ ಕೆ. ಜಗಲೂರಯ್ಯ, ವಕೀಲರಾದ ರಾಜಶೇಖರ ನಾಯಕ, ಎ.ಕೆ. ತಿಮ್ಮಪ್ಪ, ಯರ‌್ರಿಸ್ವಾಮಿ, ಸಿದ್ದಪ್ಪ, ಶಿವರಾಂ, ವಿದ್ಯಾರ್ಥಿಗಳಿದ್ದರು.
ನಾಲ್ಕು ದಿನದಲ್ಲಿ ವರದಿ ನೀಡಿ: ಕಾರ್ಯಕ್ರಮದ ಬಳಿಕ ಶಾಲೆ ವೀಕ್ಷಣೆ ಮಾಡಿದ ಸಿವಿಲ್ ನ್ಯಾಯಾಧೀಶೆ ಎಸ್. ನಿರ್ಮಲಾ, 280 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಶೌಚಗೃಹ, ಕುಡಿವ ನೀರು, ಕೊಠಡಿ ವ್ಯವಸ್ಥೆ ಇಲ್ಲವೆಂದರೆ ಹೇಗೆ ? ನಾಲ್ಕು ದಿನದೊಳಗೆ ಸಮಸ್ಯೆ ಸರಿಪಡಿಸಿ ನನಗೆ ಪ್ರಗತಿ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ, ಮುಖ್ಯಶಿಕ್ಷರಿಗೆ ಆದೇಶಿಸಿದರು.