ಜಿಲ್ಲೆ

ಹೊಲದಲ್ಲೇ ಉಳಿದ ತರಕಾರಿ, ಸೊಪ್ಪು

Chitradurga

ಕೆ.ಕೆಂಚಪ್ಪ ಮೊಳಕಾಲ್ಮೂರು: ಬಯಲು ಸೀಮೆ ರೈತರು ಜೀವನೋಪಾಯಕ್ಕಾಗಿ 1343 ಹೆಕ್ಟೇರ್‌ನಲ್ಲಿ ಬೆಳೆದಿರುವ ತರಕಾರಿ, ಸೊಪ್ಪು, ಹೂವಿನ ಬೆಳೆಗೆ ಲಾಕ್‌ಡೌನ್ ಕಾರಣ ಬೇಡಿಕೆ ತಗ್ಗಿ ಕೋಟ್ಯಂತರ ರೂ. ನಷ್ಟವಾಗಿದೆ.

ಯಾವುದೇ ನದಿ ಮೂಲಗಳಿಲ್ಲದ ತಾಲೂಕಿನ 32 ಸಾವಿರ ಹೆಕ್ಟೇರ್ ಕೃಷಿಭೂಮಿ ಪಂಪ್‌ಸೆಟ್ ಆಧಾರವಾಗಿದೆ. ಇದರಿಂದ ಲಭ್ಯವಾಗುವ ಅಲ್ಪ ನೀರಲ್ಲೇ 43 ಹೆಕ್ಟೇರ್‌ನಲ್ಲಿ ಬಾಳೆ, 21 ಹೆ. ಪಪ್ಪಾಯ, 285 ಹೆ. ಟೊಮ್ಯಾಟೊ, 40 ಹೆ. ಈರುಳ್ಳಿ 40 ಸೇರಿ ಒಟ್ಟು 1343 ಹೆಕ್ಟೇರ್‌ನಲ್ಲಿ ತರಹೇವಾರಿ ತರಕಾರಿ, ಸೊಪ್ಪು ಬೆಳೆಯಲಾಗಿದೆ.

ಬಹುತೇಕ ಬೆಳೆ ಹೊಲದಲ್ಲೇ ಹಾಳಾಗಿದೆ. ಕೆಲ ರೈತರು ಜಾನುವಾರು ಬಿಟ್ಟು ಮೇಯಿಸಿದರೆ ಇನ್ನು ಕೆಲವರು ಫಲಕ್ಕೆ ಬಂದ ತರಕಾರಿ, ಸೊಪ್ಪು ಇತ್ಯಾದಿ ಬೆಳೆಯನ್ನು ಹೊಲದಲ್ಲೇ ಬಿಟ್ಟಿದ್ದಾರೆ. ವಾರದ ಸಂತೆಯೂ ಬಂದ್ ಆಗಿದ್ದರಿಂದ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

ತಳ್ಳು ಗಾಡಿ ಮೂಲಕ ತರಕಾರಿ, ಹಣ್ಣು ಅಗತ್ಯ ವಸ್ತುಗಳ ಮಾರಾಟಕ್ಕೆ ಪರವಾನಗಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಧ್ಯವರ್ತಿಗಳು ರೈತರಿಂದ ಅತಿ ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತ ಪಟ್ಟ ಕಷ್ಟಕ್ಕೂ ಬೆಲೆ ಸಿಗದಂತಾಗಿದೆ.

ತಿಪ್ಪೀರಯ್ಯನಹಟ್ಟಿ ರೈತ ಚಂದ್ರಣ್ಣ ಹೇಳಿಕೆ: ಬೇಸಿಗೆಯಲ್ಲಿ ಸಿಗುವ ಅಲ್ಪ ನೀರಲ್ಲಿ ಮನೆ ಖರ್ಚು ಸಾಗಲೆಂದು ತರಕಾರಿ, ಸೊಪ್ಪು, ಹೂ ಬೆಳೆದಿದ್ದೇನೆ ಆದರೆ ಲಾಕ್‌ಡೌನ್ ಕಾರಣ ಮಾರುಕಟ್ಟೆ ಬಂದ್ ಆಗಿ ಫಸಲು ಮಾರಾಟವಾಗದೆ ಲಕ್ಷಾಂತರ ರೂ. ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.

ನೇರ‌್ಲಹಳ್ಳಿ ರೈತ ಕೆಂಗಪಾಪಯ್ಯ ಹೇಳಿಕೆ: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಆಯಾ ತಾಲೂಕು ಕೇಂದ್ರಗಳಲ್ಲೇ ಮಾರುಕಟ್ಟೆ ಕಲ್ಪಿಸಬೇಕು. ಬೇಸಿಗೆ ಕಾಲದಲ್ಲಿ ಈರುಳ್ಳಿಗೆ ಬೇಡಿಕೆ ಇರುತ್ತೆ ಎಂದು 70 ಪ್ಯಾಕೆಟ್ ಈರುಳ್ಳಿ ಬೆಳೆದಿದ್ದೆ. ಬೇಡಿಕೆ ಇಲ್ಲದೆ ಮನೆಯಲ್ಲೇ ಕೊಳೆಯುತ್ತಿದೆ.