ಜಿಲ್ಲೆ

ಕರೊನಾ ನಿಯಂತ್ರಣ ನಿತ್ಯದ ಮಂತ್ರವಾಗಲಿ

Chitradurga

ಮೊಳಕಾಲ್ಮೂರು: ರಾಜ್ಯದಲ್ಲಿ ದಿನೇ ದಿನೆ ಕರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಇದರ ಸಂಪೂರ್ಣ ನಿಯಂತ್ರಣಕ್ಕೆ ಅಧಿಕಾರಿಗಳೆಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದು ಎಸಿ ಪ್ರಸನ್ನಕುಮಾರ್ ಸೂಚಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಕರೊನಾ ಸೋಂಕು ತಡೆ, ಮುನ್ನಚ್ಚರಿಕೆ ಕ್ರಮ ಕುರಿತು ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆ ಕರೊನಾ ಮುಕ್ತವಾಗಿದೆ. ಇದು ಹೀಗೆಯೇ ಮುಂದುವರಿಯಬೇಕು. ಯಾರು ನಿರ್ಲಕ್ಷೃ ವಹಿಸದೆ ಎಚ್ಚರದಿಂದ ಕೆಲಸ ಮಾಡಬೇಕು. ಎಂದು ಸೂಚಿಸಿದರು.

ಗಡಿ ಗ್ರಾಮಗಳ ಚೆಕ್‌ಪೋಸ್ಟ್ ಸಂಪೂರ್ಣ ಬಂದ್ ಮಾಡಬೇಕು. ಆಂಧ್ರದಿಂದ ಏನಾದರು ಅಗತ್ಯ ವಸ್ತು ತಂದಿದ್ದರೆ ಅವನ್ನು ಮಾತ್ರ ಪಡೆಯಬೇಕೆ ಹೊರತು ಗಾಡಿಯಲ್ಲಿ ಬಂದವರಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದರು.

ನಗರ, ಹೊರ ರಾಜ್ಯ ಜಿಲ್ಲೆಗಳಿಂದ ಬಂದು ಹೋಗುವವರ ಮೇಲೆ ನಿಗಾ ಇಡಬೇಕು. ಯಾರಲ್ಲಾದರು ಸೋಂಕಿನ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯಕೀಯ ನೆರವು ಕೊಡಿಸಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ಎಂ.ಬಸವರಾಜ್ ಮಾತನಾಡಿ, ಮಧ್ಯಾಹ್ನದ ಬಿಸಿಯೂಟದ ಅಕ್ಕಿ, ಬೇಳೆ ಇನ್ನಿತರ ಸಾಮಗ್ರಿಗಳನ್ನು ನೇರ ಮಕ್ಕಳ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ ಪಡಿತರ ವಿತರಿಸಲು ಎಲ್ಲ ನ್ಯಾಯಬೆಲೆ ಅಂಗಡಿಗಳಿಗೂ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಪಂ ಇಒ ಪ್ರಕಾಶ್, ಡಾ.ಪದ್ಮಾ, ಅಧಿಕಾರಿಗಳಾದ ತಿಮ್ಮಣ್ಣ, ಡಿ.ಚಿದಾನಂದಪ್ಪ, ಪಾತಲಿಂಗಪ್ಪ, ಉಮೇಶ್ ಹಾಗೂ ಇತರರಿದ್ದರು.