ಮಂಗಳೂರು: ಅವಿಭಜಿತ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಮೊಳಹಳ್ಳಿ ಶಿವರಾಯರು ಬೆಳೆಸಿದ ರೀತಿ ಎಲ್ಲರಿಗೂ ಮಾದರಿ. ಕ್ಷೇತ್ರಕ್ಕೆ ಬಲಾಢ್ಯ ತಳಪಾಯ ಹಾಕಿಕೊಟ್ಟಿದ್ದಾರೆ. ವೃತ್ತಿಯಲ್ಲಿ ವಕೀಲರಾದರೂ, ಶಿಕ್ಷಣ, ಸಹಕಾರಕ್ಕೆ ಹೆಚ್ಚು ಮಹತ್ವ ನೀಡಿದರು. ಅವರ ಮಾರ್ಗದರ್ಶನದಲ್ಲಿ ಇಂದು ಬ್ಯಾಂಕ್ ಮುಂದುವರಿಯುತ್ತಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾಯರ 142ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ರೈತರು ಕಾರಣ. ಕೃಷಿ ಪತ್ತಿನ ಸಹಕಾರ ಸಂಘಗಗಳು ಅಡಕೆ ಕೃಷಿಗೆ ದೊಡ್ಡ ಪ್ರಮಾಣದಲ್ಲಿ ಸಾಲ ನೀಡುತ್ತಿದೆ. ಶೇ.100ರಷ್ಟು ಕೃಷಿ ಸಾಲ ಮರುಪಾವತಿ ಮಾಡಿದ ಜಿಲ್ಲೆ ಎಂದು ಹೇಳಲೂ ಹೆಮ್ಮೆ ಆಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮೊಳಹಳ್ಳಿ ಶಿವರಾಯರು ಹಾಕಿಕೊಟ್ಟ ಸಹಕಾರ ಚಳುವಳಿಯ ಮಾರ್ಗ ಅವಿಭಜಿತ ಜಿಲ್ಲೆಯ ಸಹಕಾರಿಗಳಿಗೆ ಉತ್ತೇಜನ ನೀಡಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದೇಶದಲ್ಲೇ ಅತ್ಯುತ್ತಮ ಸಹಕಾರಿ ಬ್ಯಾಂಕ್ ಆಗಿ ಮೂಡಿ ಬಂದಿದೆ. ಇಂದು ಉಭಯ ಜಿಲ್ಲೆಗಳಲ್ಲಿ ಕೃಷಿಕರಿಗೆ ಬೆನ್ನೆಲುಬಾಗಿ ಗ್ರಾಮಗ್ರಾಮಗಳ ಸಹಕಾರ ಸಂಘಗಗಳು ಇದರ ಪ್ರಯೋಜನ ಪಡೆಯುತ್ತಿದೆ. ಸಹಕಾರಿ ತತ್ವ ಯಶಸ್ವಿಯಾಗುವಲ್ಲಿ ಹಿರಿಯರ ತ್ಯಾಗ ಕಾರಣ. ಇಂದು ವಾಣಿಜ್ಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದಿದೆ ಎಂದರು.
ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೃಹತ್ ಆಗಿ ಬೆಳೆದಿದ್ದು, ಬಡವರು, ಮಹಿಳೆಯರು, ಕೃಷಿಕರ ಸಬಲೀಕರಣದ ಮೂಲಕ ಮೊಳಹಳ್ಳಿಯವರ ಆಶಯದಂತೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕಷ ಪ್ರಸಾದ್ ಕೌಶಲ್ ಶೆಟ್ಟಿ, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜನತಾ ಬಜಾರ್ ಅಧ್ಯಕ್ಷ ಪುರುಷೋತ್ತಮ ಭಟ್, ಆತ್ಮಶಕ್ತಿ ಸೊಸೈಟಿ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ದ.ಕ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್.ಕೋಟ್ಯಾನ್, ಎಂ.ವಾದಿರಾಜ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಸದಾಶಿವ ಉಳ್ಳಾಲ್, ಕೆ.ಬಿ.ಜಯರಾಜ್ ರೈ ಮೊದಲಾದವರಿದ್ದರು.
ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್ ಸ್ವಾಗತಿಸಿ, ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಮಹಾಪ್ರಬಂಧಕ ಗೋಪಿನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.