ಹುಬ್ಬಳ್ಳಿ: ಸರ್ವಧರ್ಮ ಸಮನ್ವಯ ಸಾರುವ ಮೊಹರಂ ಆಚರಣೆ ಎಲ್ಲರ ಬದುಕಿನಲ್ಲಿ ಸುಖ ಸಮೃದ್ಧಿ ತರಲಿ, ಸರ್ವರಿಗೂ ಒಳಿತಾಗಲಿ ಎಂದು ಡಾ. ಖ್ವಾಜಾಮೈನುದ್ದೀನ್ ಬಿಜಾಪುರ ಹೇಳಿದರು.
ನಗರದ ಮದರ್ ಥೆರೇಸಾ ವೃದ್ಧಾಶ್ರಮದಲ್ಲಿ ಕರ್ನಾಟಕ ಅಹಲೇ ಸುನ್ನತ್ ಕಮೀಟಿ ವತಿಯಿಂದ ಮೊಹರಂ ಅಂಗವಾಗಿ ಭಾನುವಾರ ಹಣ್ಣು ಹಂಪಲು ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮಹ್ಮದ ಪೈಗಂಬರರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಅನುಯಾಯಿಗಳು ಧರ್ಮಕ್ಕಾಗಿ ಹೋರಾಡಿ ಹುತಾತ್ಮರಾದ ದಿನ ಇದಾಗಿದೆ. ಇದನ್ನು ಹಿಂದು ಮುಸ್ಲಿಂ ಸಮಾಜದವರು ಶ್ರದ್ಧಾ ಭಕ್ತಿ ಹಾಗೂ ಭಾವೈಕ್ಯದಿಂದ ಆಚರಿಸುತ್ತಾರೆ ಎಂದರು.
ಧಾರ್ಮಿಕ ಗುರುಗಳಾದ ಮೌಲಾನಾ ನಿಯಾಜ ಆಲಂ ಮಾತನಾಡಿದರು.
ಕರ್ನಾಟಕ ಅಹಲೇ ಸುನ್ನತ ಕಮೀಟಿ ಜಂಟಿ ಕಾರ್ಯದರ್ಶಿ ಮೌಲಾನ ನಿಯಾಜ ಆಲಂ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಜೀರ ಅಹ್ಮದ ಕೋಲಕಾರ, ಬಾಬಾಜಾನ ಮುಧೋಳ, ಮಹ್ಮದ ಯುಸೂಫ್ ಸುಂಡಕೆ, ಮಹ್ಮದ ಸಿರಾಜ ಮುಲ್ಲಾ, ಮೌಲಾನಾ ಹಕಿಂ, ಮೌಲಾನಾ ಮುಕ್ತಾರ, ಮಹ್ಮದ ಹುಸೇನ ಆಸೀಫ್ ಮುಂತಾದವರು ಪಾಲ್ಗೊಂಡಿದ್ದರು.