ಹೊಳೆಆಲೂರ: ಗ್ರಾಮ ಸೇರಿದಂತೆ ಹೊಳೆಮಣ್ಣೂರ, ಗಾಡಗೋಳಿ, ಹುನಗುಂಡಿ ಸೇರಿದಂತೆ ಹೋಬಳಿಯ ಹಲವು ಗ್ರಾಮಗಳಲ್ಲಿ ಶನಿವಾರ ಹಿಂದು-ಮುಸ್ಲಿಂ ಸಮಾಜದವರು ಒಟ್ಟಾಗಿ ಮೊಹರಂ ಆಚರಿಸಿದರು.
ಗ್ರಾಮದ ಜುಮ್ಮಾ ಮಸೀದಿಯ ಬೀಬಿ ಫಾತಿಮಾ ಹಾಗೂ ಯಚ್ಚರೇಶ್ವರ ದೇವಸ್ಥಾನದ ಹತ್ತಿರದ ಹಟೇಲ್ ಭಾಷಾ ಮೌಲಾಲಿ ದೇವರುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಯುವಕರು ಜಗ್ಗಲಿಗೆಯ ನಾದಕ್ಕೆ ಹೆಜ್ಜೆ ಹಾಕಿದರು. ಹುಲಿ ವೇಷಧಾರಿಗಳು ಹಾಗೂ ಅಳ್ಳೂಳ್ಳಿ ಬವ್ವಾ ವೇಷಧಾರಿಗಳು ಕುಣಿದು ಮಕ್ಕಳನ್ನು ರಂಜಿಸಿದರು. ಓಣಿಗಳಲ್ಲಿ ಮಹಿಳೆಯರು ಸಕ್ಕರೆ, ಬೆಲ್ಲದ ಪ್ರಸಾದ ಮಾಡಿ ಹಂಚಿದರು. ಪಾಂಜಾಗಳು ದುರ್ಗದ ಬಯಲಿನ ಗರಡಿ ಮನೆ ಹತ್ತಿರ ಪರಸ್ಪರ ಅಲಂಗಿಸಿಕೊಂಡು ಅಲೈಬಲಿ ನಡೆದು ಪುನಃ ಮೆರವಣಿಗೆ ಸಾಗಿ ಸ್ವಸ್ಥಾನಕ್ಕೆ ತೆರಳಿದವು.