ಜಿಲ್ಲೆ

ಅರ್ಹರಿಗೆ ಒಲಿದ ವಿಜಯರತ್ನ ಪ್ರಶಸ್ತಿ: ಡಾ.ಹೆಗ್ಗಡೆ

Dakshina Kannada

ಬೆಳ್ತಂಗಡಿ: ಯಶಸ್ವಿ ಉದ್ಯಮಿ ಮತ್ತು ಸಮಾಜ ಸೇವೆಗೆ ನೀಡಿದ ಕೊಡುಗೆ ಆಧರಿಸಿ ವಿಜಯವಾಣಿ, ದಿಗ್ವಿಜಯ ವಿಜಯರತ್ನ ಪ್ರಶಸ್ತಿ ನೀಡುತ್ತಿದ್ದು ಇದನ್ನು ಅರ್ಹರಿಗೆ ನೀಡಿರುವುದು ಸಂತೋಷ ಉಂಟು ಮಾಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ವಿಆರ್‌ಎಲ್ ಸಮೂಹ ಸಂಸ್ಥೆಯ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನೆಲ್ ವತಿಯಿಂದ ನೀಡಲಾದ ವಿಜಯರತ್ನ ಪ್ರಶಸ್ತಿಗೆ ಭಾಜನರಾದ ಉಜಿರೆ ಲಕ್ಷ್ಮೀ ಗ್ರೂಪ್ ಮಾಲೀಕ, ಬದುಕು ಕಟ್ಟೋಣ ತಂಡದ ಸಂಚಾಲಕ ಕೆ.ಮೋಹನ್ ಕುಮಾರ್ ಅವರನ್ನು ಪತ್ನಿಯ ಜತೆ ಧರ್ಮಸ್ಥಳದಲ್ಲಿ ಅಭಿನಂದಿಸಿ ಮಾತನಾಡಿದರು. ನೇತ್ರಾವತಿ ಸ್ವಚ್ಛತೆ, ಲಕ್ಷದೀಪೋತ್ಸವ ಸಂದರ್ಭ ಪಾದಯಾತ್ರೆ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಚಾರ್ಮಾಡಿ ಸುತ್ತಮುತ್ತ ಪ್ರವಾಹ ಬಂದ ಸಂದರ್ಭ ಇವರ ಸೇವೆ ಮರೆಯವಂತಿಲ್ಲ. ನಾವು ಅನೇಕ ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಬೇಕು ಎಂದು ಹೇಳುತ್ತ ಬಂದಿದ್ದು ಇಂದು ವಿಜಯವಾಣಿ, ದಿಗ್ವಿಜಯ ಚಾನಲ್ ಆ ಕೆಲಸ ಮಾಡಿದೆ. ಇದು ಗ್ರಾಮೀಣ ಭಾಗದ ಸಾಧಕರಿಗೆ ಇನ್ನಷ್ಟು ಸಾಧಿಸಲು ಪ್ರೋತ್ಸಾಹ ನೀಡಿದಂತಿದೆ ಎಂದರು.

ಮೋಹನ್‌ಕುಮಾರ್ ಪತ್ನಿ ರೇಷ್ಮಾ, ಪುತ್ರಿ ಮಾನ್ವಿಲಕ್ಷ್ಮಿಮತ್ತು ಬದುಕು ಕಟ್ಟೋಣ ತಂಡದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇನ್ನಷ್ಟು ಸಾಧನೆಗೆ ಪ್ರೇರಣೆ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ಮೋಹನ್ ಕುಮಾರ್ ಶೂನ್ಯ ಬಂಡವಾಳದಲ್ಲಿ ಪ್ರಾರಂಭಿಸಿದ ಉದ್ಯಮ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಅವರ ಆಶಿರ್ವಾದ ಮತ್ತು ಪ್ರೋತ್ಸಾಹ ಕಾರಣ. ಪ್ರಶಸ್ತಿಯು ಇನ್ನಷ್ಟು ಸಾಧನೆ ಮಾಡಲು ಶಕ್ತಿ ತುಂಬಿದೆ ಎಂದರು.