ಜಿಲ್ಲೆ

ಮೋದಿ ಕಣ್ಣು ಗಾಳಿ ಮೇಲೆ ಬಿದ್ದಿಲ್ಲ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಶಿವಮೊಗ್ಗ: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕುತ್ತಿದ್ದು ಗಾಳಿ ಮೇಲೆ ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣು ಬಿದ್ದಿಲ್ಲ. ಒಂದು ವೇಳೆ ಗಾಳಿಯಲ್ಲಿ ಸಿಗುವ ಆಮ್ಲಜನಕವು ಮೋದಿ ಅವರ ಕಣ್ಣಿಗೆ ಬಿದ್ದರೆ ಅದಕ್ಕೂ ತೆರಿಗೆ ಹಾಕುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಡಿವಿಎಸ್ ಕಾಲೇಜಿನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸರ್ಕಾರದ ಎಲ್ಲ ಸಂಪತ್ತನ್ನು ಒಬ್ಬ ವ್ಯಕ್ತಿ(ಅದಾನಿ)ಗೆ ಕೊಟ್ಟಿದ್ದಾರೆ. ಆ ಹಣ ಮತ್ತು ಆಸ್ತಿ ನಮ್ಮದೆ ಆಗಿದ್ದರೂ ಅದನ್ನೇ ಬಳಸಿಕೊಂಡು ಉದ್ಯಮಿಯೊಬ್ಬರು 12 ಲಕ್ಷ ಕೋಟಿ ರೂ. ಗಳಿಸಿದ್ದಾರೆ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹ ಮಾಡಿದ್ದಾರೆ ಎಂದು ಕಿಡಿಕಾರಿದರು.
ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇನ್ನೂ ಉಳಿದಿದೆ. ಸಂವಿಧಾನವನ್ನು ರಕ್ಷಣೆ ಮಾಡಿದ್ದೇವೆ. ಅದರ ಹಕ್ಕು ನಮ್ಮೆಲ್ಲರಿಗೂ ಸಿಕ್ಕಿದೆ. ಅಕ್ಕಪಕ್ಕದ ರಾಷ್ಟ್ರಗಳಂತೆ ಸರ್ವಾಧಿಕಾರಿ ಧೋರಣೆ ಇದ್ದಿದ್ದರೆ ನರೇಂದ್ರ ಮೋದಿ, ಅಮಿತ್ ಷಾ ಅವರು ಮಂತ್ರಿ, ಸಿಎಂ, ಪ್ರಧಾನಿ ಆಗುತ್ತಿರಲಿಲ್ಲ. ಇದೆಲ್ಲವೂ ಕಾಂಗ್ರೆಸ್ ಕೊಡುಗೆಯಾಗಿದೆ. ವಿಚಿತ್ರ ಎಂದರೆ ಕೆಲಸ ಮಾಡಿದವರನ್ನು ಜನ ಬೈಯ್ಯುತ್ತಾರೆ. ಆದರೆ ಏನೂ ಮಾಡದಿದ್ದರೂ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಇದ್ದುದ್ದನ್ನು ಇದ್ದಂತೆ ಹೇಳುತ್ತೇವೆ. ಬಿಜೆಪಿಯವರು ಮತ ಪಡೆಯುವುದಕ್ಕಾಗಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಆದರೆ ಜನ ಸತ್ಯವನ್ನು ಬಿಟ್ಟು ಸುಳ್ಳನ್ನೇ ನಂಬುತ್ತಿರುವುದು ವಿಪರ್ಯಾಸವಾಗಿದೆ. 40 ಪರ್ಸೆಂಟ್ ಕಮೀಷನ್ ಸರ್ಕಾರ ಇದಾಗಿದೆ. ಕಮೀಷನ್ ಪಡೆದರೆ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯವಾಗಲಿದೆ. ಇವರ ಸರ್ಕಾರದಲ್ಲಿ ಲಂಚ ಇಲ್ಲದೇ ಒಂದೇ ಒಂದು ಕೆಲಸ ಕೂಡ ಆಗುವುದಿಲ್ಲ ಎಂದು ದೂರಿದರು.