ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ, ನಗರಪಾಲಿಕೆ ಮತ್ತು ವಿವಿಧ ಇಲಾಖೆಯ ಯೋಜನೆಗಳನ್ನು ಅನುಸ್ಠಾನಗೊಳಿಸುವ ಉದ್ದೇಶದಿಂದ ಸೆ. 17ರಿಂದ 25ರವರೆಗೆ ‘ಮೋದಿ ಯುಗ ಉತ್ಸವ-2022’ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
‘ಮೋದಿ ಯುಗ್ ಉತ್ಸವ್ ಸೇ ಅಂತ್ಯೋದಯ ತಕ್, ಅಮೃತ್ ಕಾಲ್ ಸೇ ಶತಮಾನ್ ತಕ್, ತಾಯಿಯ ಗರ್ಭದಿಂದ ಭೂ ಗರ್ಭದವರೆಗೆ ನಮ್ಮ ಸಂಕಲ್ಪ’ ಎಂಬ ಶೀರ್ಷಿಕೆಯಡಿ 9 ದಿನಗಳವರೆಗೆ ನಗರದ ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದ್ಯ ಸೆ.25 ರವರೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಇದನ್ನು ಅ.2 ರವರೆಗೂ ವಿಸ್ತರಿಸಲಾಗುತ್ತದೆ ಎಂದರು.
17ರಂದು ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಇಂಧನ ಸಚಿನ ವಿ.ಸುನೀಲ್‌ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಭಾಗವಹಿಸಲಿದ್ದಾರೆ.
ಅಂದು ಕ್ಷೇತ್ರದಲ್ಲಿರುವ 10,000 ಮಹಿಳೆಯರಿಗೆ ಆರ್ಥಿಕ ಶಕ್ತಿ ಹೆಚ್ಚಿಸುವ ದೃಷ್ಟಿಯಿಂದ ಮಹಿಳಾ ಮಾರುಕಟ್ಟೆಯನ್ನು ಪ್ರಾರಂಭಿಸಲು ಚಾಲನೆ ನೀಡಲಾಗುತ್ತದೆ. ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ. ಸೆ.25 ರವರೆಗೆ ಪ್ರತಿನಿತ್ಯ ಮಕ್ಕಳು, ಹಿರಿಯರು ಯುವಕ ಯುವತಿಯರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಸೆ.25 ರಂದು ಪಂಡಿತ್ ದೀನ್ ದಯಾಳ ಉಪಾಧ್ಯಾಯರ ಅಂತ್ಯೋದಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಕ್ಷೇತ್ರದ 472 ಕಿ.ಮೀ. ರಸ್ತೆಯ ಸಂಪೂರ್ಣ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಿದ್ದು, 200 ಕಿ.ಮೀ. ಪೂರ್ಣಗೊಂಡಿದೆ. ಡಿಸೆಂಬರ್ ತಿಂಗಳ ಒಳಗೆ ಉಳಿದ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ. 120 ಪಾರ್ಕ್‌ಗಳು ವಿಷಯಾಧಾರಿತ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಿದೆ. ಎಲ್ಲ ಸಮುದಾಯದ ಒಟ್ಟು 11 ಸ್ಮಶಾನಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆ.ಆರ್ ಕ್ಷೇತ್ರವನ್ನು ಆರೋಗ್ಯವಂತ ಕ್ಷೇತ್ರವನ್ನಾಗಿ ಮಾಡಲು ಈಗಾಗಲೇ ಸಾರ್ವಜನಿಕರ ಮನೆಗಳಲ್ಲಿಯೇ ಆರೋಗ್ಯ ತಪಾಸಣಾ ಕಾರ್ಯ ಮುಗಿದಿದ್ದು, ಶೇ. 20 ರಷ್ಟು ಸಕ್ಕರೆ ಕಾಯಿಲೆ, ಶೇ. 16 ರಷ್ಟು ರಕ್ತದೊತ್ತಡ ಸಮಸ್ಯೆ ಇರುವುದು ಕಂಡುಬಂದಿದೆ. ಜನರ ಆರೋಗ್ಯವನ್ನು ಗುಣಪಡಿಸುವುದು ಮತ್ತು ರೋಗ ಬರದಂತೆ ತಡೆಯಲಾಗುತ್ತದೆ. ಈ ಸಂಬಂಧ ಅಲೋಪಥಿ, ಆಯುರ್ವೇದ, ಯೋಗ, ನ್ಯಾಚುರೋಪತಿ ಹಾಗೂ ಜೀವನಶೈಲಿಯ ಮೂಲಕ ಆರೋಗ್ಯವಂತ ಮೈಸೂರು ರೂಪಿಸಲು ‘ಹೆಲ್ತಿ ಮೈಸೂರು’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಮಹಿಳಾ ಸಬಲೀಕರಣ ನಮ್ಮ ಉದ್ದೇಶವಾಗಿದೆ. ಎಂಎಂಆರ್ ಮತ್ತು ಐಎಂಆರ್ ಪ್ರಕರಣವನ್ನು ಕ್ಷೇತ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಶೂನ್ಯಕ್ಕೆ ತರುವುದು ನಮ್ಮ ಗುರಿಯಾಗಿದೆ. ಈ ಸಂಬಂಧ ನಾನಾ ಯೋಜನೆ ರೂಪಿಸಲಾಗುತ್ತದೆ ಎಂದರು.
ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿ/ಉದ್ಯೋಗ ಮೇಳ, ಸ್ವಂತ ಉದ್ಯೋಗಕ್ಕೆ ಬೇಕಾದ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಮೂಲಕವಾಗಿ ದೇಶಕ್ಕೆ ಮಾದರಿ ಮಾಡುವ ಹಲವು ಯೋಜನೆಗಳ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.
‘ಸರ್ವರಿಗೂ ಸೂರು’ ಎನ್ನುವ ಪ್ರಧಾನಮಂತ್ರಿಗಳ ಕನಸನ್ನು ನನಸು ಮಾಡುವ ಯೋಜನೆಯಡಿ ಈಗಾಗಲೇ 2,212 ಮನೆಗಳ ಮಂಜೂರಾತಿ ನೀಡಲಾಗಿದ್ದು, 2,350 ಮನೆಗಳ ಮಂಜೂರಾತಿಯನ್ನು ನೀಡುವುದಲ್ಲದೆ, ಡಿಸೆಂಬರ್ ಅಂತ್ಯದ ಒಳಗೆ ಉಳಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಮನೆ ನೀಡುವ ಯೋಜನೆಗಳಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಗೌರವಾನ್ವಿತವಾಗಿ ವೃತ್ತಿ ಮಾಡಲು ಕೌಶಲ ಮತ್ತು ಹಣಕಾಸು ನೆರವು ನೀಡುವ ಯೋಜನೆಗಳನ್ನು ಕೇಂದ್ರದ ಮತ್ತು ರಾಜ್ಯದ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದರು.
ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮುಖಂಡರಾದ ಶ್ರೀಹರಿ, ಡಿ.ಟಿ.ಪ್ರಕಾಶ್ ಇತರರಿದ್ದರು.