ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ತಯಾರಾದ ಮಾಸ್ಕ್ ಅನ್ನು ಪ್ರಧಾನಿ ಮೋದಿ ಧರಿಸಿರುವುದು ಗಮನ ಸೆಳೆದಿದೆ. ನಗರದ ಸಾಮಾಜಿಕ ಕಾರ್ಯಕರ್ತ ಕೆ.ಪಿ. ವಿವೇಕಾನಂದ, ಅವರ ಪತ್ನಿ ಶಾಂತಾ, ಪುತ್ರಿಯರಾದ ಕಾವ್ಯಾ ಮತ್ತು ನಮ್ರತಾ ಹಾಗೂ ಎಲೆಕ್ಟ್ರಿಕಲ್ ಉತ್ಪನ್ನಗಳ ವ್ಯಾಪಾರಿ ರಂಜಿತ್ ಸಿಂಗ್ ಅವರ ಸೊಸೆ ಕವಿತಾ ದೇವಿ ಮಾಸ್ಕ್ ತಯಾರಿಸಿದವರು.
ಲಾಕ್‌ಡೌನ್ ಸಂದರ್ಭದಲ್ಲಿ ಮಾಸ್ಕ್ ತಯಾರಿಸುವ ಐಡಿಯಾ ಹೊಳೆದಿದೆ. ಒಟ್ಟು 8 ಸಾವಿರ ಮಾಸ್ಕ್ ತಯಾರಿಸಿದ್ದು 7 ಸಾವಿರ ಮಾಸ್ಕ್ ಉಚಿತವಾಗಿ ಹಂಚಲಾಯಿತು. ಈ ಮಾಸ್ಕ್‌ಗಳನ್ನು ಗುಣಮಟ್ಟದ ಕಾಟನ್ ಬಟ್ಟೆ ಮತ್ತು ಕ್ಯಾನ್‌ವಾಸ್ ಬಳಸಿ ಸಿದ್ಧಪಡಿಸಲಾಗಿದ್ದು ಉಸಿರಾಟಕ್ಕೆ ತೊಂದರೆ ಆಗದಂತೆ ವಿನ್ಯಾಸಗೊಳಿಸಲಾಗಿದೆ. ನೋಡಲು ಆಕರ್ಷಕವಾಗಿವೆ. ಹಾಗಾಗಿ ಸ್ನೇಹಿತರು, ಬಂಧುಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಇದರಿಂದ ಸ್ಫೂರ್ತಿಗೊಂಡು ಕೇಸರಿ, ಬಿಳಿ, ಹಸಿರು ಬಣ್ಣದ 40 ಮಾಸ್ಕ್‌ಗಳನ್ನು ಆ. 13ರಂದು ಅಂಚೆ ಇಲಾಖೆಯ ಸ್ಪೀಡ್‌ಪೋಸ್ಟ್ ಮೂಲಕ ಪ್ರಧಾನಿ ಮೋದಿ ಅವರಿಗೆ ಕಳಿಸಿದೆವು. ಆ. 17ರಂದು ಅವರಿಗೆ ತಲುಪಿದವು. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ ಮೋದಿ ಅವರು ಆ ಮಾಸ್ಕ್ ಧರಿಸಿದ ಭಾವಚಿತ್ರವೊಂದನ್ನು ನೋಡಿದ ನಂತರ ದಾವಣಗೆರೆಯಿಂದ ಕಳಿಸಿದ ಮಾಸ್ಕ್ ಎಂದು ಮನವರಿಕೆಯಾಯಿತು. ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ವಿವೇಕಾನಂದ ತಿಳಿಸಿದರು.