ಪ್ರಧಾನಿ ನರೇಂದ್ರ ಮೋದಿ ಏ.8, 9 ರಂದು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ಅಧಿಕಾರಿಗಳು ಮಂಗಳವಾರ ನಗರದಲ್ಲಿ ಭದ್ರತೆಯನ್ನು ಪರಿಶೀಲಿಸಿದರು.
ಏ.9 ರಂದು ಬೆಳಗ್ಗೆ 10ಕ್ಕೆ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಗಣತಿ ಬಿಡುಗಡೆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಚಾಮರಾಜನಗರ ಜಿಲ್ಲೆ ಹಾಗೂ ಮಧುಮಲೈನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್‌ಪಿಜಿ ಅಧಿಕಾರಿಗಳು ನಗರದ ಮಂಡಕಳ್ಳಿ ವಿಮಾನ ನಿಲ್ದಾಣ, ಒವಲ್ ಮೈದಾನ, ಮುಕ್ತ ವಿವಿಯ ಘಟಿಕೊ ೀತ್ಸವ ಭವನ ಹಾಗೂ ಮುಕ್ತ ವಿವಿಯ ಆವರಣದಲ್ಲಿ ಭದ್ರತೆ ಪರಿಶೀಲಿಸಿದರು. ನರೇಂದ್ರ ಮೋದಿ ಏ.8 ರಂದು ಸಂಜೆ ವಿಮಾನದ ಮೂಲಕ ಚೆನ್ನೈನಿಂದ ಮೈಸೂರಿಗೆ ಆಗಮಿಸಿ ನಗರದ ರ‌್ಯಾಡಿಸನ್ ಹೋಟೆಲ್‌ನಲ್ಲಿ ತಂಗಲಿದ್ದಾರೆ.
ಏ.9 ರಂದು ಬೆಳಗ್ಗೆ 6ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಗುಂಡ್ಲುಪೇಟೆಯ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ತೆರಳಿ ಬಂಡೀಪುರ ಸಫಾರಿ ಕ್ಯಾಪ್ ಹಾಗೂ ರಾಂಪುರ ಆನೆ ಶಿಬಿರಕ್ಕೆ ಭೇಟಿ ನೀಡಿ ಮಾವುತರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಮಧುಮಲೈಗೆ ಭೇಟಿ ನೀಡಿ ಆಸ್ಕರ್ ಪ್ರಶಸ್ತಿ ವಿಜೇತ ‘ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿ ಚಿತ್ರದಲ್ಲಿ ನಟಿಸಿರುವ ಬೊಮ್ಮ ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂ ಡಿರುವ ಕಾರ್ಯಕ್ರಮದಲ್ಲಿ ಹುಲಿಗಣತಿ ಬಿಡುಗಡೆ ಮಾಡಲಿದ್ದಾರೆ.