ಮೈಸೂರು: ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನ.13 ರಂದು ತಾರಾಲಯ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಎಸ್ಪಿಜಿ ತಂಡ ಭದ್ರತೆಯ ಪರಿಶೀಲನೆ ನಡೆಸಿತು.
ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಲಲಿತಮಹಲ್ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ಎಸ್ಜಿಪಿ ತಂಡ ಭದ್ರತೆ ಪರಿಶೀಲನೆ ನಡೆಸಿತು. ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಹೆಲಿಪ್ಯಾಡ್ಗೆ ಆಗಮಿಸಿ ಸುರಕ್ಷತೆಯನ್ನು ಪರಿಶೀಲಿಸಿತು. ಮೋದಿ ಸಾಗುವ ಮಾರ್ಗವನ್ನು ಸುಣ್ಣ ಬಣ್ಣಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತಿದೆ.
ಸಂಚಾರ ಮಾರ್ಗದಲ್ಲಿ ಬದಲಾವಣೆ: ನರೇಂದ್ರ ಮೋದಿ ಮೈಸೂರು ಭೇಟಿಯ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ನಗರದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ನಗರ ಪೊಲೀಸ್ ಅಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ನ.12 ಮತ್ತು 13 ರಂದು ಗಣ್ಯರು ಸಂಚರಿಸುವ ಮಾರ್ಗ ಹಾಗೂ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ಬದಲಾವಣೆಗಳನ್ನು ಮಾಡಲಾಗಿದೆ. ಲಲಿತಾದ್ರಿಪುರ ರಿಂಗ್ ರಸ್ತೆ ಜಂಕ್ಷನ್ನಿಂದ ಹೆಲಿಪ್ಯಾಡ್ ಜಂಕ್ಷನ್ವರೆಗೆ, ಐವಾಕ್ ಜಂಕ್ಷನ್ನಿಂದ ಚಾಮುಂಡಿ ಬೆಟ್ಟದ ರಸ್ತೆ ಜಂಕ್ಷನ್ವರೆಗೆ, ತಿ.ನರಸೀಪುರ ಟಿ ಜಂಕ್ಷನ್ನಿಂದ ಎಂ.ಆರ್.ಸಿ ವೃತ್ತದವರೆಗೆ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟದವರೆಗೆ, ಎಂ.ಆರ್.ಸಿ ವೃತ್ತದಿಂದ ರಾಜಹಂಸ ಜಂಕ್ಷನ್ವರೆಗೆ, ರಾಜಹಂಸ ಜಂಕ್ಷನ್ನಿಂದ ನಂಜನಗೂಡು ರಿಂಗ್ ರಸ್ತೆ ಜಂಕ್ಷನ್ವರೆಗೆ ಸಂಚಾರ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಜನರು ಪರ್ಯಾಯ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಯಿಂದ ಚಾಮುಂಡಿ ಬೆಟ್ಟಕ್ಕೆ ಸಾಗುವ ವಾಹನಗಳು ಪರ್ಯಾಯವಾಗಿ ಗೌತಮಬುದ್ಧ ವೃತ್ತ ಎಂ.ಎಂ.ರಸ್ತೆ ಆರ್.ಮಹದೇವಪ್ಪ ವೃತ್ತ ಸಂಗೀತಾ ಕಾರ್ನರ್ ಟಿ.ಜಂಕ್ಷನ್, ಸಾವಿತ್ರಿ ಬಾಯಿ ಫುಲೆ ವೃತ್ತ, ರಿಂಗ್ ರಸ್ತೆ, ಉತ್ತನಹಳ್ಳಿ ರಿಂಗ್ ರಸ್ತೆ, ಚಾಮುಂಡಿ ಬೆಟ್ಟದ ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು.