ಜಿಲ್ಲೆ

ವಿದ್ಯುತ್ ಸಮಸ್ಯೆಗೆ ಮೋದಿ ಪರಿಹಾರ: ಶಿಕ್ಷಣ ಸಚಿವ ನಾಗೇಶ್ ಹೇಳಿಕೆ

Tumakuru

ನೊಣವಿನಕೆರೆ: ಕೆಲವರು ಬಿಜೆಪಿ ಏನು ಕೆಲಸ ಮಾಡಿದೆ ಎಂದು ಕೇಳುತ್ತಾರೆ. 1998-99ರಲ್ಲಿ ಕೇವಲ ಆರು ಗಂಟೆ ವಿದ್ಯುತ್ ಕೊಟ್ಟರೆ ಸಾಕು ಎಂಬ ಪರಿಸ್ಥಿತಿ ಇತ್ತು. ಆದರೆ ಬಿಜೆಪಿ ಅಧಿಕಾರ ಬಂದ ನಂತರ ವಿದ್ಯುತ್ ಸಮಸ್ಯೆ ಬಗೆಹರಿದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.


ತಿಪಟೂರು ತಾಲೂಕು ನೊಣವಿನಕೆರೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಬೆಸ್ಕಾಂ ಸಹಯೋಗದಲ್ಲಿ ಕೇಂದ್ರ ಸರ್ಕಾರದ ‘ಉಜ್ವಲ ಭಾರತ ಉಜ್ವಲ ಭವಿಷ್ಯ’ ಕಾರ್ಯಕ್ರಮದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, 2014ರಲ್ಲಿ ರೈತರು ವರ್ಷದಲ್ಲಿ ಅನೇಕ ಬಾರಿ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಒಂದು ಕೆಲಸವಾಗಿತ್ತು. ಅಧಿಕಾರಿಗಳು ಎಷ್ಟು ಪ್ರಯತ್ನ ಮಾಡಿದರೂ ಸಂಪೂರ್ಣ ವಿದ್ಯುತ್ ಕೊಡುವ ಸಾಮರ್ಥ್ಯ ಈ ದೇಶದಲ್ಲಿ ಇರಲಿಲ್ಲ. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸತತವಾಗಿ ಅಧಿಕಾರಿಗಳ ಸಭೆ ನಡೆಸಿ ವಿದ್ಯುತ್ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.


ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಡಿಒಎಸ್ಪಿ ಸಿದ್ಧಾರ್ಥ ಗೋಯಲ್, ಚಿತ್ರದುರ್ಗ ವಲಯ ಬೆಸ್ಕಾಂ ಅಧಿಕಾರಿ ಗೋವಿಂದಪ್ಪ, ತುಮಕೂರು ಬೆಸ್ಕಾಂ ವಿಭಾಗದ ಜಗದೀಶ್, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಇದ್ದರು.


ಸುಮಾರು 22 ಗಂಟೆ ವಿದ್ಯುತ್ ಕೊಡುವ ಶಕ್ತಿಯನ್ನು ದೇಶ ಹೊಂದಿದ್ದು, 10 ವರ್ಷದ ಹಿಂದೆ ಯಾವುದೇ ಗ್ರಾಮಗಳಲ್ಲಿ ಅಧಿಕಾರಿಗಳು ಸಭೆ ಮಾಡಿದರೆ ವಿದ್ಯುತ್ ಸಮಸ್ಯೆ ಪ್ರಮುಖ ಚರ್ಚೆಯಾಗಿತ್ತು, ಈಗ 24 ಗಂಟೆಯಲ್ಲಿ ಟಿಸಿ ಸಿಗುವ ಮಟ್ಟಕ್ಕೆ ಬಂದಿದ್ದೇವೆ. ವಿದ್ಯುತ್ ಇಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂಬ ಅರಿವು ಇದ್ದು, ಕೇಂದ್ರ ಸರ್ಕಾರದ ಯೋಜನೆ ಯಶಸ್ವಿಯಾಗಲು ಸಹಕಾರ ನೀಡೋಣ ಎಂದರು.


ಹೂಡಿಕೆ ಮಾಡಲು ಹೆಚ್ಚಿದ ಆಸಕ್ತಿ: ನವೀಕರಿಸಬಹುದಾದ ಶಕ್ತಿಯ ಮೂಲದಿಂದ 1.63 ಲಕ್ಷ ಮೆ.ವಾ. ವಿದ್ಯುತ್ ಉತ್ಪಾದಿಸುತ್ತಿದ್ದೇವೆ, ಪ್ರಪಂಚದಲ್ಲೇ ಅತೀ ವೇಗವಾಗಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು. 2030ಕ್ಕೆ ನವೀಕರಿಸಬಹುದಾದ ಶಕ್ತಿಯ ಮೂಲದಿಂದ ನಮ್ಮ ಉತ್ಪಾದನಾ ಸಾಮರ್ಥ್ಯ ಶೇ.40 ಹೆಚ್ಚಲಿದೆ. ಹಾಗಾಗಿ, ನಿರ್ಧಾರಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿ ಗುರಿ ಸಾಧಿಸಿದ್ದೇವೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ವಿದ್ಯುತ್ ಉತ್ಪಾದನೆ ಮಾಡಿದರೂ ವಿದ್ಯುತ್ ಕೊರತೆ ಇರುವ ರಾಜ್ಯಗಳಿಗೆ ವಿತರಣೆ ಮಾಡಲಾಗುತ್ತಿದೆ. ದೇಶದಲ್ಲಿ ವಿದ್ಯುತ್ ಲಭ್ಯತೆ ಹೆಚ್ಚಿರುವ ಕಾರಣ ಜಗತ್ತಿನ ಹಲವು ಸಂಸ್ಥೆಗಳು ದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಕಳೆದ 65 ವರ್ಷಗಳಲ್ಲಿ ಮಾಡದ ವಿದ್ಯುತ್ ಉತ್ಪಾದನೆಯನ್ನು ನಾವಿಂದು 10 ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದರು. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಮಾಲಿನ್ಯ ಕಡಿಮೆ ಮಾಡಲು ಮತ್ತು ವಿದ್ಯುತ್ ವಾಹನಗಳ ರೀಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.


ಯೋಜನೆ ಯಶಸ್ವಿಗೆ ಸಹಕರಿಸೋಣ: ವಿದ್ಯುತ್ ಮಹೋತ್ಸವ 2047 ವಾಕ್ಯದಡಿ ಕಾರ್ಯಕ್ರಮ ನಡೆಯುತ್ತಿದ್ದು, 1947ರಲ್ಲಿ ಸ್ವಾತಂತ್ರ್ಯ ಬಂದು 2047ಕ್ಕೆ ಸಂಪೂರ್ಣ ಮರು ಉತ್ಪಾದನೆ ಮಾಡಿ, ಸೂರ್ಯ ಮತ್ತು ಗಾಳಿಯಿಂದ ಉತ್ಪಾದನೆಯಾಗುವ ಸೌರ ವಿದ್ಯುತ್ ಅನ್ನು ಮುಂದಿನ ದಿನಗಳಲ್ಲಿ ಉಪಯೋಗ ಮಾಡುವುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

2014ರಲ್ಲಿ ವಿದ್ಯುತ್ ಉತ್ಪಾದನೆ 2,48,556 ಮೆಗಾವಾಟ್ ನಿಂದ 4ಲಕ್ಷ ಮೆಗಾವಾಟ್‌ಗೆ ಹೆಚ್ಚಾಗಿದೆ. ಭಾರತ ನೆರೆ ರಾಷ್ಟಗಳಿಗೆ ವಿದ್ಯುತ್ ಪೂರೈಸುತ್ತಿದ್ದು, ದೇಶದ ಎಲ್ಲ ಭಾಗಗಳನ್ನು ಸಂಪರ್ಕಿಸುವ ಪ್ರಸರಣ ಗ್ರೇಡ್ ಲೈನ್ ಮೂಲಕ ದೇಶದ ಯಾವುದೇ ಭಾಗಕ್ಕೆ ಸರಬರಾಜು ಮಾಡಬಹುದಾಗಿದೆ. 2030ಕ್ಕೆ ನವೀಕರಿಸುವ ಮೂಲದಿಂದ ನಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಶೇ.100 ಪ್ರಗತಿ ಸಾಧಿಸಿದ್ದೇವೆ.
-ದಿವಿತ್‌ಗೌಡ, ಕೇಂದ್ರ ಸರ್ಕಾರದ ನೋಡಲ್ ಅಧಿಕಾರಿ