ಮಂಗಳೂರು : ಮಂಗಳೂರಿನಲ್ಲಿ ಏ.14ರಂದು ನಡೆಸಲು ಉದ್ದೇಶಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಮಾವೇಶದ ಬದಲು ಸಾಯಂಕಾಲ 5ಕ್ಕೆ ಬೃಹತ್ ರೋಡ್‌ಶೋ ನಡೆಸಲು ತೀರ್ಮಾನಿಸಲಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ
ಸತೀಶ್ ಕುಂಪಲ ತಿಳಿಸಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಮೊದಲು ಸಾರ್ವಜನಿಕ ಸಭೆ ನಡೆಸುವುದೆಂದು ತೀರ್ಮಾನವಾಗಿತ್ತು. ಅದಕ್ಕಾಗಿ ಗೋಲ್ಡ್‌ಫಿಂಚ್ ಮೈದಾನದಲ್ಲಿ ಚಪ್ಪರ ಮುಹೂರ್ತ ಕೂಡ ನಡೆಸಲಾಗಿತ್ತು. ಆದರೆ ಅನಂತರ ಬಂದ ಸೂಚನೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಸಮಾವೇಶದ ಬದಲು ರೋಡ್ ಶೋ ಮಾಡುವಂತೆ ರಾಜ್ಯ ಘಟಕದಿಂದ ಸೂಚನೆ ಬಂದಿದೆ. ಅದಕ್ಕೆ ಪೂರಕವಾದ ತಯಾರಿಗಳನ್ನು ಮಾಡುತ್ತಿದ್ದೇವೆ ಎಂದರು
ಏ.14ರಂದು ಸಾಯಂಕಾಲ 5ಕ್ಕೆ ನಗರದ ನಾರಾಯಣ ಗುರು ವೃತ್ತದಿಂದ ಆರಂಭಿಸಿ ಪಿವಿಎಸ್ ವೃತ್ತದ ಮೂಲಕ ಹಂಪನಕಟ್ಟೆ
ಸಿಗ್ನಲ್ ತನಕ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್ ಶೋ ನಡೆಯಲಿದೆ. ಅಗತ್ಯ ಅನುಮತಿಗಳನ್ನು ಪಡೆಯಲಾಗಿದ್ದು, ಭದ್ರತೆಗಾಗಿ ಪೊಲೀಸ್ ಇಲಾಖೆಯ ಜತೆಗೆ ಸಂವಹನ ನಡೆಸಲಾಗಿದೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ
ಕಾರ್ಯಕರ್ತರು, ಬೆಂಬಲಿಗರು ಬಹು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡುಬಿದಿರೆ, ಮಂಗಳೂರು ವಿಧಾನಸಭಾ ಕ್ಷೇತ್ರಗಳಿಂದ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಯೋಜನೆ ಮಾಡಲಾಗಿದೆ. ಬೂತ್ ಮಟ್ಟದ ಪಕ್ಷದ ಕಾರ್ಯಗಳು ಪ್ರಗತಿಯಲ್ಲಿರುವ ಕಾರಣ ಉಳಿದ ನಾಲ್ಕು ಕ್ಷೇತ್ರಗಳಿಗೆ ಈ ವಿಷಯದಲ್ಲಿ ಹೆಚ್ಚಿನ ಗುರಿ ನಿಗದಿ ಮಾಡಿಲ್ಲ.
ಒಟ್ಟು 2ರಿಂದ 2.5 ಕಿ.ಮೀ ಉದ್ದದ ರೋಡ್ ಶೋ ನಡೆಯಲಿದೆ ಎಂದು ಸತೀಶ್ ಕುಂಪಲ ತಿಳಿಸಿದರು.
ಬಿಜೆಪಿಯ ರಾಜ್ಯ ಚುನಾವಣಾ ಸಂಚಾಲಕ ಜಗದೀಶ್ ಹಿರೇಮನಿ, ಜಿಲ್ಲಾ ಸಂಚಾಲಕ ನಿತಿನ್‌ಕುಮಾರ್, ಜಿಲ್ಲಾ ಪ್ರಧಾನ
ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ, ಪ್ರಮುಖರಾದ ಜಗದೀಶ್ ಶೇಣವ, ಸುದರ್ಶನ ಮೂಡುಬಿದಿರೆ, ಕಸ್ತೂರಿ ಪಂಜ ಉಪಸ್ಥಿತರಿದ್ದರು.