ಜಿಲ್ಲೆ

ಏ.14ರಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ರ‌್ಯಾಲಿ

Mangaluru - Hariprasad Rai



ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಧ್ಯಾಹ್ನ 3ಕ್ಕೆ ಮಂಗಳೂರಿಗೆ ಆಗಮಿಸಿ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಮಂಗಳೂರಿನ ಸಮಾವೇಶ ಮುಗಿದ ಬಳಿಕ
ಸಾಯಂಕಾಲ 5ಕ್ಕೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿ.ಸುನೀಲ್ ಕುಮಾರ್ ‘ ದ.ಕ.ಜಿಲ್ಲೆಗೆ ಹಿಂದಿನ ಬಾರಿ ಮೋದಿ ಅವರು ಭೇಟಿ ನೀಡಿದಾಗ ಸೇರಿದ ಜನತೆಯ ದಾಖಲೆ ಮೀರಿಸುವಂತೆ ಈ ಬಾರಿ ಜನರು ಸಮಾವೇಶಗೊಳ್ಳಲಿದ್ದಾರೆ. ಪ್ರಧಾನಿ ಭೇಟಿಯಿಂದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದೆ ಏ.15 ರಿಂದ 17ರವರೆಗೆ ಪಕ್ಷದ ರಾಜ್ಯಾಧ್ಯಕ್ಷರಿಂದ ತೊಡಗಿ ಎಲ್ಲ ಪ್ರಮುಖರು, ಕಾರ್ಯಕರ್ತರು ಮನೆ ಮನೆ ಸಂಪರ್ಕ ನಡೆಸಲಿದ್ದಾರೆ ಎಂದರು.
ಏ.10, 11ರಂದು ಬಿಜೆಪಿ ಬೂತ್ ಮಟ್ಟದ ಮಹಾ ಪ್ರಚಾರ ಅಭಿಯಾನ ಕೈಗೊಳ್ಳಲಿದ್ದು,, ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಈ
ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತ್ತು ವಿಕಸಿತ ಭಾರತ ಎಂಬ ಮೂರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ ಎಂದು ಅವರು ತಿಳಿಸಿದರು.
ಶೌಚಾಲಯ ನಿರ್ಮಾಣದಿಂದ ತೊಡಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ, ಮನೆ ಮನೆಗೆ ಎಲ್‌ಪಿಜಿ ಸಂಪರ್ಕದಿಂದ ಹಿಡಿದು ಚಂದ್ರಯಾನದ ತನಕ ಪ್ರಧಾನಿ ಮೋದಿ ಅವರ ಸರ್ಕಾರ ಕೈಗೊಂಡ ಎಲ್ಲ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಮನೆ ಮನೆಗೆ
ತಲುಪಿಸುತ್ತೇವೆ. ಎಲ್ಲ ಹಂತಗಳಲ್ಲಿ ಮತದಾರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.
* ವಿಧ್ವಂಸಕ ಶಕ್ತಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನಕ್ಸಲರು ಹಾಗೂ ಇತರ ವಿಧ್ವಂಸಕ ಶಕ್ತಿಗಳಿಗೆ ಹೆಚ್ಚಿನ ಹುಮ್ಮಸ್ಸು ಬಂದಿದೆ.. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ನಕ್ಸಲರು ಮತ್ತೆ ಚಿಗುರಿಕೊಂಡಿದ್ದಾರೆ. ಕೆಲವು ಹಳ್ಳಿಗಳಿಗೆ, ಮನೆಗಳಿಗೆ ಭೇಟಿ ನೀಡಿ ಸುಲಿಗೆ ಮಾಡುತ್ತಿದ್ದಾರೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಸಮಾಜ ದ್ರೋಹಿಗಳನ್ನು ಸದೆಬಡಿಯಬೇಕು ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಅರ‌್ವಾರ ಉಪಸ್ಥಿತರಿದ್ದರು.
................