ಜಿಲ್ಲೆ

ಮೋದಿ, ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ ಮೊದಲು ರಾಜೀನಾಮೆ ಕೊಡಲಿ: ಸಿಎಂ ಸಿದ್ದರಾಮಯ್ಯ ತಿರುಗೇಟು

ಮಂಜುನಾಥ ತಿಮ್ಮಯ್ಯ

ಮೈಸೂರು: ಮೊದಲು ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ಮೊದಲು ರಾಜೀನಾಮೆ ಕೊಡಿಸಲಿ. ಆ ಮೇಲೆ ಬಿಜೆಪಿಯವರು ನನ್ನನ್ನು ಕೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟುಕೊಟ್ಟರು.


ನಗರದಲ್ಲಿ ಕೆಡಿಪಿ ಸಭೆಯ ಬಳಿಕ ಶುಕ್ರವಾರ ರಾತ್ರಿ 10ರ ಸುಮಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅವರು, ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾದ ಕುರಿತು ಮೊದಲ ಪ್ರತಿಕ್ರಿಯೆ ಕೊಟ್ಟರು.


ಹೌದಪ್ಪ, ತನಿಖೆ ಮಾಡಿ ವರದಿ ಕೊಡಿ ಎಂದು ಕೋರ್ಟ್ ಹೇಳಿದೆ. ಅದರ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ್ದಾರೆ ಎಂದರು.


ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ಎಫ್‌ಐಆರ್ ಆಗಿದೆ. ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡ್ತಾ ಇದ್ದರು. ಈಗ ಎಫ್‌ಐಆರ್ ಆದ ಮೇಲೆ ಅವರು ರಾಜೀನಾಮೆ ಕೊಡುತ್ತಾರೆಯೇ? ಎಂದೂ ಪ್ರಶ್ನಿಸಿದರು.


ಮೊದಲು ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಇಳಿಸಲಿ. ಆ ಮೇಲೆ ಅವರು ನನ್ನನ್ನು ಕೇಳಲಿ. ಪ್ರಧಾನಿ ನರೇಂದ್ರ ಮೋದಿ ಅವರೂ ರಾಜೀನಾಮೆ ನೀಡಬೇಕು. ಅವರು ಚುನಾವಣೆ ಬಾಂಡನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.