ಜಿಲ್ಲೆ

ಮೋದಿ ಸೋಲಲ್ಲ... ರಾಹುಲ್ ಗಾಂಧಿಗೆ ಮದುವೆ ಆಗಲ್ಲ...ಬೊಮ್ಮಾಯಿ ವ್ಯಂಗ್ಯ

ಬೆಳಗಾವಿ: ದೇಶ ನರೇಂದ್ರ ಮೋದಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
 ನಗರದ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಗಾವಿ ಮಹಾನಗರ ಹಾಗೂ ಗ್ರಾಮಾಂತರ ಘಟಕದ ಬಿಜೆಪಿ ಕಾರ್ಯಕರ್ತರ ಸಭೆ ಅವರು ಮಾತನಾಡಿದರು. ಈಚೆಗೆ ಪಟ್ನಾದಲ್ಲಿ ತೃತೀಯ ರಂಗದ ನಾಯಕರ ಸಭೆ ನಡೆಯಿತು. ದೇಶದ ಉದ್ಧಾರ ಬಗ್ಗೆ ಅಲ್ಲಿ ಚರ್ಚೆ ಆಗಿಲ್ಲ, ನರೇಂದ್ರ ಮೋದಿ ಅವರನ್ನು ಹೇಗೆ ಸೋಲಿಸಬೇಕು. ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಆಗಿದೆ. ಮೋದಿ ಅವರು ಸೋಲುವುದಿಲ್ಲ. ರಾಹುಲ್ ಅವರು ಮದುವೆ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
 ಲೋಕಸಭೆ ಚುನಾವಣೆನೇ ಬೇರೆ. ವಿಧಾನಸಭೆ ಚುನಾವಣೆನೇ ಬೇರೆ. ನರೇಂದ್ರ ಮೋದಿ ಬಂದ ಮೇಲೆ ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ. ದೇಶದಲ್ಲಿ 12 ಕೋಟಿ ಶೌಚಗೃಹ ನಿರ್ಮಾಣವಾಗಿವೆ. ಪ್ರತಿ ಮನೆಗೆ ನೀರನ್ನು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ದರು. 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಹಲವು ಕಾರ್ಯ ಮಾಡಿದ್ದೇವೆ. ಮೋದಿ ಎದುರಿಸಲು ವಿರೋಧ ಪಕ್ಷದಲ್ಲಿ ಒಬ್ಬ ನಾಯಕ ಇಲ್ಲ. ಕರ್ನಾಟಕದಲ್ಲಿ 25 ಸ್ಥಾನಗಳನ್ನು ಬಿಜೆಪಿ ಮತ್ತೆ ಗೆಲ್ಲುತ್ತದೆ. ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದರು.
 ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ ಹೊತ್ತಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. 5 ಸಾವಿರ ಕೋಟಿ ರೂ. ಅನುದಾನದವನ್ನು ಉತ್ತರ ಕರ್ನಾಟಕದ ನೀರಾವರಿ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ. ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದರು.
 ಕಾಂಗ್ರೆಸ್ ಗ್ಯಾರಂಟಿಯಿಂದ ಸಾರಿಗೆ ಸಂಸ್ಥೆ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡೀಸೆಲ್ ಇಲ್ಲದೇ ಬಸ್‌ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ವಿದ್ಯುತ್ ಇಲ್ಲದೆ ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಒಂದೇ ತಿಂಗಳಲ್ಲಿ ಈ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು. ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ?  ಸರ್ಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ, ಏನಾಗಿದೆ ಎಂಬುದು ನನಗೆ ಗೊತ್ತು. ಕೆಲವೇ ದಿನಗಳಲ್ಲಿ ಇವರ ಬಣ್ಣ ಬಯಲು ಆಗಲಿದೆ ಎಂದು ಬಾಂಬ್ ಸಿಡಿಸಿದರು.
 ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಗೊತ್ತು. ದೆಹಲಿಯವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ರಾಜಕಾರಣದಲ್ಲಿ ಎಂದಿಗೂ ರಾಜೀ ಮಾಡಿಕೊಂಡಿಲ್ಲ. ಮನೆಗೆ ಬರುವವರನ್ನು ಬೇಡ ಎನ್ನಲ್ಲು ಆಗುವುದಿಲ್ಲ. ಬಿಜೆಪಿ ಪಕ್ಷ ತಾಯಿಯ ಸಮಾನ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ ಎಂದರು.