ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಮೈಸೂರು ಜಿಲ್ಲಾ ಚುನಾವಣಾ ಉಸ್ತುವಾರಿ ರಾಬಿನ್ ದೇವಯ್ಯ ಅವರನ್ನು ಸನ್ಮಾನಿಸಲಾಯಿತು. ಅಪ್ಪಚ್ಚು ರಂಜನ್, ಮನುಕುಮಾರ್ ರೈ, ಭುವನೇಶ್ವರಿ, ಮಂಜುಳಾ, ರೂಪಾ ಸತೀಶ್, ಯಮುನ ಚಂಗಪ್ಪ ಇದ್ದರು.  
ಜಿಲ್ಲೆ

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಪಣ

ಸೋಮವಾರಪೇಟೆ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ಬಿಜೆಪಿ ಸೋಮವಾರಪೇಟೆ ಮಂಡಲ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಚಲೋ, ನೂತನ ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರೈತ ಸಮ್ಮಾನ್ ನಿಧಿಯಡಿ ಪ್ರತಿ ರೈತನ ಖಾತೆಗೆ ವಾರ್ಷಿಕ 6 ಸಾವಿರ ರೂ. ಹಾಕುತ್ತಿರುವುದು ಹೆಮ್ಮೆಯ ವಿಚಾರ. ಜನ್‌ಧನ್, ಉಜ್ವಲ , ದೀನ್‌ದಯಾಳ್ ಯೋಜನೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರದ ಜನಪ್ರ ಕಾರ್ಯಕ್ರಮ. ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸುವ ಮೂಲಕ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಎಲ್ಲರನ್ನೂ ಒಂದುಗೂಡಿಸಿಕೊಂಡು ಕೊಡಗಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಬೇಕಿದೆ ಎಂದರು.

ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಹೊಸ ಮತದಾರರು ಬಿಜೆಪಿಯೊಂದಿಗಿದ್ದು, ಮೋದಿ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಅಲ್ಲದೆ ವಿಸ್ತಾರಕ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಮಾಜೀ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಚುನಾವಣಾ ಉಸ್ತುವಾರಿ ರಾಬಿನ್ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಮನುಕುಮಾರ್ ರೈ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಪ್ರಮುಖರಾದ ಅಭಿಮನ್ಯುಕುಮಾರ್, ಎಚ್.ಕೆ. ಮಾದಪ್ಪ, ಕೊಮಾರಪ್ಪ, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಪ್ರತಾಪ್, ಲೋಕೇಶ್ವರಿ ಗೋಪಾಲ್, ಭುವನೇಶ್ವರಿ, ಮಂಜುಳಾ, ರೂಪಾ ಸತೀಶ್, ಯಮುನ ಚಂಗಪ್ಪ ಇದ್ದರು.