ಮಂಗಳೂರು: ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ(ಎನ್‌ಐಟಿಕೆ)ದಲ್ಲಿ ಒಟ್ಟು 132 ಕೋಟಿ ರು.ಗಳಲ್ಲಿ ನಿರ್ಮಿಸಲಾದ ಮೂರು ವಿದ್ಯಾರ್ಥಿನಿಲಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಜಮ್ಮುವಿನ ಐಐಎಎಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಲೋಕಾರ್ಪಣೆಗೊಳಿಸಿದರು.
ದೇಶದ 12 ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಸುರತ್ಕಲ್ ಎನ್‌ಐಟಿಕೆ ಕೂಡ ಒಂದು. ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಎನ್‌ಐಟಿಕೆಯಲ್ಲಿನ ಬ್ರಹ್ಮಗಿರಿ ಮತ್ತು ಶಿವಾಲಿಕ್ (ಬಾಲಕರ) ಮತ್ತು ಗೋದಾವರಿ (ಬಾಲಕಿಯರ)ವಿದ್ಯಾರ್ಥಿನಿಲಯವನ್ನು ಅನಾವರಣಗೊಳಿಸಿದ್ದಾರೆ. ಈ ಹಾಸ್ಟೆಲ್‌ನಿಂದ 1,527 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
1960ರಲ್ಲಿ ಶ್ರೀನಿವಾಸ ಮಲ್ಯರು ಸ್ಥಾಪಿಸಿದ ಕೆಆರ್‌ಇಸಿ 2002ರಲ್ಲಿ ಎನ್‌ಐಟಿಕೆ ಆಗಿ ಪರಿವರ್ತನೆಗೊಂಡಿದೆ. ದ.ಕ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಕಳೆದ 10 ವರ್ಷಗಳಲ್ಲಿ 79 ಸಾವಿರ ಕೋಟಿ ರು. ಅನುದಾನ ಲಭಿಸಿದ್ದು, ಈ ಪೈಕಿ ವಿವಿಧ ಶೈಕ್ಷಣಿಕ ಅಭಿವೃದ್ದಿ ಕಾರ್ಯಗಳಿಗೆ ಸುರತ್ಕಲ್ ಎನ್‌ಐಟಿಕೆಗೆ 588 ಕೋಟಿ ರು. ಬಿಡುಗಡೆಗೊಂಡಿದೆ.
ಎನ್‌ಐಟಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ.ರವಿ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಪಾಲಿಕೆ ಸದಸ್ಯರಾದ ಶೋಭಾ ರಾಣಿ, ಶ್ವೇತಾ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಇದ್ದರು.
ಡೀನ್ ಚಿತ್ತರಂಜನ್ ಹೆಗ್ಡೆ ಪ್ರಾಸ್ತಾವಿಸಿದರು. ಪ್ರೊ. ಪುಷ್ಪರಾಜ್ ಶೆಟ್ಟಿ ವಂದಿಸಿದರು.
---------------------
ಎನ್‌ಐಟಿಕೆಯಲ್ಲಿ ಅಭಿವೃದ್ದಿ, ಜ್ಞಾನ ಹಾಗೂ ಸಮಾಜಮುಖಿ ಶಿಕ್ಷಣ ಸಿಗುತ್ತಿದ್ದು, ಇದು ದೇಶದ ಭದ್ರ ಬನಾದಿಗೆ ಅತ್ಯಗತ್ಯವಾದ ಶೈಕ್ಷಣಿಕ ಬದಕನ್ನು ನೀಡುತ್ತಿದೆ. ಭಾರತ ದೇಶದದಲ್ಲಿ ಸುಸ್ಥಿರ ಕ್ಯಾಂಪಸ್ ಪೈಕಿ ಐಐಟಿಗಳಿಗಿಂತ ಮುಂಚೂಣಿಯ ಎರಡನೇ ಸ್ಥಾನದಲ್ಲಿ ಸುರತ್ಕಲ್ ಎನ್‌ಐಟಿಕೆ ಇದೆ ಎಂದು ಹೆಗ್ಗಳಿಕೆಯ ಸಂಗತಿ. ಎನ್‌ಐಟಿಕೆಯಿಂದ ಅಭಿವೃದ್ದಿಪೂರ್ಣ ಶಿಕ್ಷಣ, ನೂತನ ಸಂಶೋಧನೆ, ಆರೋಗ್ಯ ಸ್ನೇಹಿ ಪರಿಸರಕ್ಕೆ ಆದ್ಯತೆ ನೀಡಲಾಗುತ್ತಿದೆ.
ಪ್ರೊ. ಬಿ.ರವಿ, ನಿರ್ದೇಶಕರು, ಎನ್‌ಐಟಿಕೆ ಸುರತ್ನಲ್, ಮಂಗಳೂರು
-------------------
ವಿವಿ ಸಂಶೋಧನಾ ವಿಭಾಗಕ್ಕೆ 20 ಕೋಟಿ ರು. ಬಿಡುಗಡೆ
ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ ಎಲ್ಲ ರಂಗಗಳಲ್ಲೂ ಭಾರತ ಅಭಿವೃದ್ಧಿ ಕಾಣಬೇಕು ಎಂಬುದು ಪ್ರಧಾನಿಗಳ ಕನಸು. ರಾಷ್ಟ್ರೀಯೀಯ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ಶೈಕ್ಷಣಿಕವಾಗಿ ಪರಿವರ್ತನೆ ತರಲಾಗುತ್ತಿದ್ದು, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ವಿಭಾಗಕ್ಕಾಗಿ ಪೆರಿಯ ಕ್ಯಾಂಪಸ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಆನ್‌ಲೈನ್ ಮೂಲಕ ಲೋಕಾರ್ಪಣೆಗೊಳಿಸಿದರು. ಮಾತ್ರವಲ್ಲದೆ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗಕ್ಕೆ 20 ಕೋಟಿ ರು. ಬಿಡುಗಡೆಗೊಳಿಸಲಾಗಿದೆ.