ಜಿಲ್ಲೆ

ವಿಶ್ವ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದ ಮೋದಿ

ಹಳಿಯಾಳ: ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರುಳು ಶ್ರಮಿಸುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ, ಮಾದರಿ ಆಡಳಿತದ ಮೂಲಕ ವಿಶ್ವ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದ್ದಾರೆ ಎಂದು ಮಾಜಿ ಶಾಸಕ ಸುನಿಲ ಹೆಗಡೆ ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರ ಸಹಯೋಗದೊಂದಿಗೆ ಹಳಿಯಾಳ ಬಿಜೆಪಿ ಹಾಗೂ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಅವರು ಮಾತನಾಡಿದರು.


ಮೋದಿಜಿ ಜನ್ಮದಿನವನ್ನು ಅವಿಸ್ಮರಣೀಯವಾಗಿಸಲು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ರಕ್ತದಾನ ಎಲ್ಲ ದಾನಗಳಲ್ಲೇ ಶ್ರೇಷ್ಠವಾಗಿ, ಜೀವ ಉಳಿಸಲು ನೆರವಾಗುತ್ತದೆ ಎಂದರು.
ಶಿಬಿರದಲ್ಲಿ 44 ಯೂನಿಟ್ ರಕ್ತ ಸಂಗ್ರಹಿಸಲಾಯಿತು.


ಬಿಜೆಪಿ ಹಳಿಯಾಳ ತಾಲೂಕು ಅಧ್ಯಕ್ಷ ಗಣಪತಿ ಕರಂಜೇಕರ, ಪ್ರಮುಖರಾದ ಅನಿಲ ಮುತ್ನಾಳೆ, ಉದಯ ಹೂಲಿ, ಶಿವಾಜಿ ನರಸಾನಿ, ವಿಲಾಸ ಯಡವಿ, ಉಮೇಶ ದೇಶಪಾಂಡೆ, ವಾಸುದೇವ ಪೂಜಾರಿ, ಯಲ್ಲಪ್ಪ ಹೊನ್ನೋಜಿ, ಜಯಲಕ್ಷ್ಮೀ ಚವ್ಹಾಣ, ಸಂಗೀತಾ ಜಾವಳೇಕರ ಇತರರಿದ್ದರು.