ಜಿಲ್ಲೆ

ವಿಶ್ವ ನಾಯಕರಾಗಿ ಹೊರಹೊಮ್ಮಿದ ಮೋದಿ

ಸೋಮನಾಥ ರೆಡ್ಡಿ

ಮುಂಡರಗಿ: ಪ್ರಧಾನಿ ನರೇಂದ್ರ ಮೋದಿ 9 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಿಂದಿನ ಎಲ್ಲ ಸರ್ಕಾರಗಳ ಸಾಧನೆಗಳಿಗೆ ಸಮವಾಗಿದೆ. ಹೀಗಾಗಿ ಮೋದಿ ಜಾಗತಿಕ ಮಟ್ಟದಲ್ಲಿ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಹೇಳಿದರು.

ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಹಾಗೂ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಂತೋಷ ಸಂಭ್ರಮ ಕೂಟ (ಸ್ಮೀತಾನ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನಮೋಹನ್ ಸಿಂಗ್ ಅವರು ಕೈಗೊಂಡಿದ್ದ ಜಾಗತೀಕರಣ, ಉದಾರೀಕರಣ ಮತ್ತು ಆರ್ಥಿಕ ನೀತಿಯಿಂದ ಆಧುನಿಕ ಭಾರತ ಪ್ರಗತಿಯತ್ತ ಸಾಗಿತು. ವಿದ್ಯಾರ್ಥಿಗಳು ಉದ್ಯೋಗ ಅರಸದೆ ಉದ್ಯಮಿದಾರರಾಗಿ ಉದ್ಯೋಗ ಕೊಡುವ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.

ಚೈತನ್ಯ ಅಕಾಡೆಮಿ ನಿರ್ದೇಶಕಿ ವೀಣಾ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ್​ಪಾಟೀಲ, ಪ್ರಾಚಾರ್ಯ ಡಾ.ಡಿ.ಸಿ. ಮಠ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಚ್. ಜಂಗಣವಾರಿ, ಎಂ.ಜಿ. ಗಚ್ಚಣ್ಣವರ, ಜಗನ್ನಾಥ ಅಳವಂಡಿ, ಶ್ರೀಕಾಂತ ಅಳವಂಡಿ, ಮಂಜುನಾಥ ಅಳವಂಡಿ, ಟಿ.ಬಿ. ದಂಡಿನ, ಅಶೋಕ ಅಂಗಡಿ, ಅಂಬರೇಶ ಶಿವಶೆಟ್ಟರ್, ಇತರರಿದ್ದರು. ಅನಿತಾ ಬಿಸನಳ್ಳಿ, ಕಾವ್ಯಾ ಅಳವಂಡಿ ಹಾಗೂ ಉಷಾ ಅಕ್ಕಸಾಲಿ ಕಾರ್ಯಕ್ರಮ ನಿರ್ವಹಿಸಿದರು.