ಅರಕೇರಾ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರೂ ಸರಿಸಾಟಿ ಇಲ್ಲ. ವಿರೋಧ ಪಕ್ಷದ ನಾಯಕರ ಸುಳ್ಳು ಪ್ರಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿನಯ್ ಹೇಳಿದರು.
ಪ್ರಧಾನಿ ಮೋದಿ ಜನ್ಮದಿನ ನಿಮಿತ್ತ ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಕಾರ್ಯದ ಭಾಗವಾಗಿ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಬಿಜೆಪಿಯಲ್ಲಿ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಮೋದಿ ಅವರು ನಿದರ್ಶನ. ಆರ್ಥಿಕ, ಕೃಷಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಆಯುಷ್ಮಾನ್, ಜನಧನ, ಉಜ್ವಲ್ ಯೋಜನೆಗಳು ಬಡ ವರ್ಗಕ್ಕೆ ಅನುಕೂಲವಾಗಿವೆ. ದೇಶದಲ್ಲಿ ದಿನಕ್ಕೆ 30 ಕಿಮೀ ರಸ್ತೆ, 15 ಕಿಮೀ ರೈಲ್ವೆ ಸಂಪರ್ಕ ಅಭಿವೃದ್ಧಿಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವ ಕೊಂಡಾಡುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದ್ದರಿಂದ ಭಾರತೀಯರು ಶಾಂತಿಯುತವಾಗಿ ನೆಲೆಸಲು ಸಾಧ್ಯವಾಗಿದೆ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠವಾದದ್ದು. ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಯುನಿಟ್ ರಕ್ತದ ಅಗತ್ಯವಿದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು ಎಂದರು. 150 ಜನ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿದರು.
ಮಂಡಲ ಅಧ್ಯಕ್ಷ ಲಕ್ಷ್ಮಣ ರಾಠೋಡ, ಯುವ ಮೋರ್ಚಾ ಅಧ್ಯಕ್ಷ ಕೆ.ಭಗವಂತ್ರಾಯ ನಾಯಕ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರವಿಗೌಡ, ಕಾರ್ತಿಕ ರೆಡ್ಡಿ, ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಪಾ, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ರಿಮ್ಸ್ ನಾಮನಿರ್ದೇಶಿತ ಮಾಜಿ ಸದಸ್ಯ ಡಾ.ಎಚ್.ಎ ನಾಡಗೌಡ, ಪ್ರಮುಖರಾದ ಸೀತಣ್ಣ ನಾಯಕ, ವೆಂಕಟೇಶ ನಾಯಕ ದೊರೆ, ಶರಣಗೌಡ ಮಾಪಾ ಬಿ.ಗಣೇಕಲ್, ಶರಣಪ್ಪ ನಾಯಕ ಬುದ್ದಿನ್ನಿ, ದುರುಗಣ್ಣ ನಾಯಕ, ಅಯ್ಯನಗೌಡ ಚಡಕಲಗುಡ್ಡ, ಕಿಷ್ಟಪ್ಪ ನಾಯಕ ಇತರರಿದ್ದರು.