ಜಿಲ್ಲೆ

ಮೋದಿ ಪೌರ ಕಾರ್ಮಿಕರಿಗೆ ಗೌರವ ತಂದುಕೊಟ್ಟರು: ರಾಮದಾಸ್

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಸಮುದಾಯಕ್ಕೆ ದೊಡ್ಡ ಗೌರವ ತಂದುಕೊಟ್ಟಿದ್ದಾರೆ ಎಂದು ಶಾಸಕ ಎ.ಎಸ್.ರಾಮದಾಸ್ ತಿಳಿಸಿದರು.

ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿಯು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೌರ ಕಾರ್ಮಿಕರ ಪಾದವನ್ನು ತೊಳೆಯುವ ಮೂಲಕ ಮನುಷ್ಯ ಎಂದ ಮೇಲೆ ಎಲ್ಲರೂ ಒಂದೇ. ಯಾವುದೇ ಜಾತಿ, ಧರ್ಮ, ಕೆಲಸಗಳಲ್ಲಿ ಭೇದ ಭಾವ ಮಾಡಬಾರದು. ಮನಷ್ಯರಾಗಿ ಸಮಾಜದ ಏಳಿಗೆಗೆ ದುಡಿಯಬೇಕು ಎಂಬ ಸಂದೇಶ ನೀಡಿದ್ದಾರೆ ಎಂದರು.

ಪೌರ ಕಾರ್ಮಿಕ ಬಂಧುಗಳು ನಗರದ ಸ್ವಚ್ಛತೆ ಕಾಪಾಡುವ ಮೂಲಕ ಎಲ್ಲ ಪ್ರಜೆಗಳ ಆರೋಗ್ಯ ಕಾಪಾಡುತ್ತಿದ್ದಾರೆ. ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ಪಾಲಿಕೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿವೆ.

ಇಡೀ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ಬಳಗದ ಕಾರ್ಯ ಶ್ಲಾಘನೀಯ. ಸಮಾಜದ ಜಬಾವ್ದಾರಿ ತಿಳಿದು ಒಂದು ಪತ್ರಿಕೆ, ಒಂದು ಸುದ್ದಿ ವಾಹಿನಿ ಇಂತಹ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯ. ಇದೊಂದು ಸಮಾಜಮುಖಿ ಕೆಲಸವಾಗಿದೆ ಎಂದರು.

ಪೌರಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ‘ಆರೋಗ್ಯ ಮೈಸೂರು’ ಯೋಜನೆಗೆ ಸಹಕಾರ ನೀಡಬೇಕು ಎಂದರು.