ಜಿಲ್ಲೆ

ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಹರಿಪ್ರಸಾದಗಿಲ್ಲ - ಬಿ.ಸಿ. ಪಾಟೀಲ

Belagavi

ಬೆಳಗಾವಿ: ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್ ಎಲ್ಲ ವುಡ್‌ಗಳಲ್ಲಿಯೂ ನಶೆ ಇದ್ದೇ ಇದೆ. ಅದನ್ನು ಬಳಕೆ ಮಾಡುವ ವ್ಯಕ್ತಿಗಳ ಚಾರಿತ್ರ್ಯದ ಬಗ್ಗೆ ಯೋಚನೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಹಿಂದೆ ಯಾರೇ ಇದ್ದರೂ ಬಿಡುವುದಿಲ್ಲ. ಮಟ್ಟ ಹಾಕುತ್ತೇವೆ ಎಂದರು.

ಬಿಜೆಪಿ ವಿರುದ್ಧ ಭಾನುವಾರ ಬೆಳಗಾವಿಯಲ್ಲಿ ಮಾತನಾಡಿದ್ದ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಅಫೀಮು ಸೇವಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಅವರು ಯಾವಾಗ ನೋಡಿದರು? ನೋಡಿದ್ದರೆ ಮೊದಲೇ ಹೇಳಬೇಕಿತ್ತಲ್ಲವೇ? ಇಷ್ಟು ದಿನ ಏಕೆ ಬಾಯಿ ಮುಚ್ಚಿಕೊಂಡಿದ್ದರು? ಆಪಾದನೆ ಮಾಡುವುದು ತಪ್ಪು. ಆದರೆ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಮಾಡಿದವರು ಯಾರು? ಗಲಾಟೆ ಎಲ್ಲಿಂದ ಆಗಿದೆ? ಕೋಮುಗಲಭೆಗೆ ಅವರು ಪ್ರಚೋದನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದಲ್ಲಿ ಯಾವುದೇ ವೈಫಲ್ಯ ಇಲ್ಲ: ಮೋದಿ ಸರ್ಕಾರದ ಬಗ್ಗೆ ಅಥವಾ ವಿರುದ್ಧ ಪ್ರಶ್ನೆ ಮಾಡುವ ಯೋಗ್ಯತೆ ಹರಿಪ್ರಸಾದ್ ಅವರಿಗಷ್ಟೇ ಅಲ್ಲ, ಕಾಂಗ್ರೆಸ್‌ಗೇ ಇಲ್ಲ. ‘ಇನ್ನೂ 50 ವರ್ಷ ವಿರೋಧ ಪಕ್ಷದಲ್ಲೇ ಕಾಂಗ್ರೆಸ್ ಕೂರಬೇಕಾಗುತ್ತದೆ’ ಎಂದು ಅವರ ಮುಖಂಡ ಗುಲಾಂನಬಿ ಆಜಾದ್ ಹೇಳಿದ್ದಾರೆ. ಕಾಂಗ್ರೆಸ್‌ನ ಹಿರಿಯ ಧುರೀಣರೇ ಒಪ್ಪಿಕೊಂಡಿರುವಾಗ ಬಿಜೆಪಿಯ ವೈಫಲ್ಯ ಎಲ್ಲಿಂದ ಬಂತು? ಯಡಿಯೂರಪ್ಪ ಸಿಎಂಆದ ಮೇಲೆ ಏಕಾಂಗಿಯಾಗಿ ಪ್ರವಾಹ ಪರಿಸ್ಥಿತಿ ನಿಭಾಯಿಸಿದರು. ಬರಗಾಲ, ಕೋವಿಡ್ ಸಹ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರದಲ್ಲಿ ಯಾವುದೇ ವೈಫಲ್ಯ ಇಲ್ಲ ಎಂದು ಉತ್ತರ ನೀಡಿದರು.