ಜಿಲ್ಲೆ

Modi 3.0: ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಲ್ಹಾದ್​ ಜೋಶಿ!

ನವದೆಹಲಿ: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇವರ ಸಾಕ್ಷಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಹದಿನೆಂಟನೇಯವರಾಗಿ ಪ್ರಹ್ಲಾದ್ ಜೋಶಿ ಅವರು ದೇವರ ಹೆಸರಿನಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅತ್ತ ಪ್ರಲ್ಹಾದ್​ ಜೋಶಿ ಪ್ರಮಾಣ ಸ್ವೀಕರಿಸುತ್ತಿದಂತೆ ಹುಬ್ಬಳ್ಳಿಯಲ್ಲಿ ಬಿಜೆಪಿ ವತಿಯಿಂದ ದುರ್ಗದ ಬೈಲ್​ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೇಶಕ್ಕೆ ಮೋದಿಜೀ, ಧಾರವಾಡಕ್ಕೆ ಜೋಶಿಜೀ ಎಂದು ಜೈಕಾರ ಹಾಕಿದ್ದಾರೆ.

ಆರ್‌ಎಸ್‌ಎಸ್ ನಿಷ್ಠಾವಂತ ಮತ್ತು ಕರ್ನಾಟಕದ ಕೇಸರಿ ಪಕ್ಷದ ಭದ್ರಕೋಟೆಯಾದ ಧಾರವಾಡದಿಂದ ಐದನೇ ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಪ್ರಲ್ಹಾದ್ ಜೋಶಿ ಅವರು ಭಾನುವಾರ ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾತ್ರಿ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಲ್ಹಾದ್ ಜೋಶಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್‌ನ ವಿನೋದ್ ಅಸೋಟಿ ಅವರ ವಿರುದ್ಧ 97,324 ಮತಗಳ ಅಂತರದಿಂದ ಗೆದ್ದಿದ್ದಾರೆ.

2019ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಪ್ರಲ್ಹಾದ ಜೋಶಿ ಅವರು ಪ್ರಧಾನಿ ಮೋದಿ ಸಂಪುಟದಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಇದೀಗ ಮತ್ತೆ ಮೋದಿ ಅವರ ಮೂರನೇ ಅವಧಿಯ NDA ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೋದಿ ಹೊರೆತು ಪಡಿಸಿ ಇಂದು ಒಟ್ಟು 72 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 61 ಮಂದಿ ಬಿಜೆಪಿ ಹಾಗೂ 11 ಎನ್​ಡಿಎ ಒಕ್ಕೂಟ ಸಂಸದರಿದ್ದಾರೆ. 72 ಸಂಸದರಲ್ಲಿ 30 ಸಂಪುಟ ಹಾಗೂ 36 ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.