ಜಿಲ್ಲೆ

ರಾಗಿ ತಿನಿಸುಗಳಿಗೆ ಮಾಡರ್ನ್ ಟಚ್

ಡಿ.ಪಿ.ಮಹೇಶ್ ಯಳಂದೂರು
ಕೇಂದ್ರ ಸರ್ಕಾರ ರಾಗಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಭರವಸೆ ನೀಡಿದೆ. ಇದರಿಂದ ದೇಶದಲ್ಲೇ ಅತಿ ಹೆಚ್ಚು ರಾಗಿ ಬೆಳೆಯುವ ಕರ್ನಾಟಕದ ರೈತರು ಸಂತಸಗೊಂಡಿದ್ದಾರೆ. ಈ ನಡುವೆ, ತಾಲೂಕಿನ ಗ್ರಾಮವೊಂದರಲ್ಲಿ ರಾಗಿಯ ಉಪ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ಮೂಲಕ ಗಮನ ಸೆಳೆಯಲಾಗಿದೆ.

ಹೊನ್ನೂರು ಗ್ರಾಮದ ನಿಸರ್ಗ ಸಾವಯವ ಕೃಷಿಕರ ಸಂಘದ ವತಿಯಿಂದ ರಾಗಿಯನ್ನು ಬಳಸಿಕೊಂಡು ಹಲವಾರು ತಿಂಡಿಗಳನ್ನು ಮಾಡುವುದಲ್ಲದೆ, ಜನರಿಗೆ ಇಷ್ಟವಾಗುವ ರೀತಿಯಲ್ಲಿ ಆ ಖಾದ್ಯಗಳಿಗೆ ನವೀನ ಸ್ಪರ್ಶ ನೀಡಲಾಗಿದೆ. ಸಾವಯವ ಕೃಷಿಯಲ್ಲಿ ತೊಡಗಿರುವ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅವರು ತಮ್ಮ ಮನೆಯಲ್ಲೇ ಇಂತಹ ಪ್ರಯೋಗ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಮೈಸೂರಿನಲ್ಲಿ ನಡೆಯುವ ಸಾವಯವ ಸಂತೆ ಹಾಗೂ ಬೆಂಗಳೂರಿನ ಕೆಲವು ಸಾವಯವ ಅಂಗಡಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

ಬಾಯಲ್ಲಿ ನೀರೂರಿಸುವ ತಿನಿಸುಗಳು: ರಾಗಿಯನ್ನು ಬೀಸು ಕಲ್ಲಿನಲ್ಲೇ ಹಿಟ್ಟು ಮಾಡುತ್ತಾರೆ. ಹತ್ತಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಪುಡಿ ಮಾಡಿದ ಹಿಟ್ಟಿನಲ್ಲಿ ರಾಗಿ ಮಾಲ್ಟ್, ಒಣಹಣ್ಣುಗಳಿಂದ ತಯಾರಿಸಿದ ರಾಗಿಯ ಸಿಹಿಲಡ್ಡು, ನಿಪ್ಪಟ್ಟು, ಚಕ್ಕುಲಿ, ಮುರುಕು, ಹಾಲುಬಾಯಿ ಸೇರಿ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದಕ್ಕೆಲ್ಲ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತದೆ.

ಸಾವಯವ ರಾಗಿಗೆ ಮೊದಲ ಆದ್ಯತೆ: ಹೊನ್ನೂರು ಪ್ರಕಾಶ್ ಸಾವಯವ ಕೃಷಿ ಪದ್ಧತಿಯಿಂದಲೇ ಬೆಳೆದ ರಾಗಿಗೆ ಮೊದಲ ಆದ್ಯತೆ ನೀಡುತ್ತಾರೆ. ಸಾವಯವ ರಾಗಿಯನ್ನು ಶುದ್ಧೀಕರಿಸಿ, ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತದೆ. ಕಲ್ಲಿನಿಂದ ಬೀಸಿದ ಹಿಟ್ಟಿಗೆ ಹೆಚ್ಚಿನ ಬೇಡಿಕೆ ಇದ್ದು, ಅದನ್ನು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತದೆ. ರಾಗಿಯ ಉಪ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು ಎಂಬುದು ಸಂಘದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯತ್ನ ನಿರಂತರವಾಗಿ ಸಾಗಿದೆ.

ರಾಗಿ ಅತ್ಯಂತ ಪೌಷ್ಟಿಕ ಆಹಾರ. ಇದರಲ್ಲಿ ಸಸಾರಜನಕ, ಶರ್ಕರಪಿಷ್ಟ, ಸುಣ್ಣ ಹಾಗೂ ಕಬ್ಬಿಣದ ಅಂಶ ಹೆಚ್ಚಾಗಿದೆ. ಕೊಬ್ಬಿನ ಪ್ರಮಾಣ ಅತಿ ಕಡಿಮೆ ಇರುವುದರಿಂದ ರಾಗಿಯ ಬಳಕೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಮ್ಮ ಸಂಘದ ವತಿಯಿಂದ ರಾಗಿಯನ್ನು ಜನಪ್ರಿಯಗೊಳಿಸಲು ಹಲವು ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಿದೆ. ಜಾಗತಿಕ ಬ್ರಾೃಂಡ್‌ನಿಂದ ರಾಗಿಯ ಉಪ ಉತ್ಪನ್ನಗಳಿಗೆ ಭವಿಷ್ಯದಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚುವ ಸಾಧ್ಯತೆಗಳಿವೆ.
ಹೊನ್ನೂರು ಪ್ರಕಾಶ್, ರೈತ ಸಂಘದ ಜಿಲ್ಲಾಧ್ಯಕ್ಷ