| ಜಗದೀಶ ಹೊಂಬಳಿ ಬೆಳಗಾವಿ
ನಗರದ ನೈರ್ಮಲ್ಯ, ಶುಚಿತ್ವದ ದೃಷ್ಟಿಯಿಂದ ಸರ್ಕಾರ ರೂಪಿಸಿದ್ದ ಆಧುನಿಕ ಕಸಾಯಿಖಾನೆ ಯೋಜನೆ ನನೆಗುದಿಗೆ ಬಿದ್ದಿದೆ. ಸರ್ಕಾರ 2013-14ರಲ್ಲಿಯೇ ಯೋಜನೆ ರೂಪಿಸಿದರೂ ಪಾಲಿಕೆ ಅಧಿಕಾರಿಗಳು ಅನುಷ್ಠಾನಗೊಳಿಸುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ.
ಯೋಜನೆ ಜಾರಿಯಾದಲ್ಲಿ ನಗರದ ಎಲ್ಲೆಂದರಲ್ಲಿ ತಲೆ ಎತ್ತಿರುವ ಕಸಾಯಿಖಾನೆಗಳಿಗೆ ಮುಕ್ತಿ ದೊರೆಯಲಿದೆ. ನಗರ ಇನ್ನೂ ಸುಂದರವಾಗಿ ಕಂಗೊಳಿಸಲಿದೆ. ಆದರೆ, ಅಧಿಕಾರಿಗಳು ಮಾತ್ರ ಅನಾಸಕ್ತಿ ತೋರುತ್ತಿರುವುದು ಪ್ರಜ್ಞಾವಂತರ ಕಣ್ಣು ಕೆಂಪಾಗುವಂತೆ ಮಾಡಿದೆ.
ಏನಿದು ಯೋಜನೆ?: ಜನರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ನಗರದ ಮಧ್ಯೆ ಇರುವ ಕಸಾಯಿಖಾನೆಗಳನ್ನು ಬಂದ್ ಮಾಡಿಸಿ, ನಗರದ ಹೊರ ವಲಯದ ಪ್ರತ್ಯೇಕ ಜಾಗದಲ್ಲಿ ಕಸಾಯಿಖಾನೆ ಸೌಲಭ್ಯ ಕಲ್ಪಿಸುವುದು ಯೋಜನೆ ಉದ್ದೇಶವಾಗಿದೆ. ಈ ಕಸಾಯಿಖಾನೆಗಳಲ್ಲಿ ಪ್ರಾಣಿ ವಧೆಗೂ ಮುನ್ನ ವೈದ್ಯರು ಪ್ರಾಣಿಗಳ ಆರೋಗ್ಯ ಪರಿಶೀಲಿಸಿದ ನಂತರ ಪಾಲಿಕೆ ನಿಗದಿ ಪಡಿಸಿದ ಸಿಬ್ಬಂದಿಗಳೇ ಪ್ರಾಣಿ ವಧೆ ಮಾಡುತ್ತಾರೆ.
ಇದರಿಂದ ಪ್ರಾಣಿಗಳ ಉಪ ಉತ್ಪನ್ನಗಳ ಬಳಕೆ ಕೂಡ ಸಾಧ್ಯವಾಗುತ್ತದೆ. ಜತೆಗೆ ನಗರ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಮಹಾನಗರ ಪಾಲಿಕೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಆಧುನಿಕ ಕಸಾಯಿ ಖಾನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಶೇ. 50ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 50ರಷ್ಟು ಹಣವನ್ನು ಈ ಯೋಜನೆಗೆ ವಿನಿಯೋಗಿಸುತ್ತವೆ. ಬೇರೆ ಕೆಲ ಮಹಾನಗರ ಪಾಲಿಕೆಗಳಲ್ಲಿ ಈ ಯೋಜನೆ ಈಗಾಗಲೇ ಆರಂಭವಾಗಿದೆ. ಆದರೆ, ಬೆಳಗಾವಿಯಲ್ಲಿ ಮಾತ್ರ ರಾಜಕೀಯ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿದೆ.
ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಕೆ.ಐ.ಡಿ.ಬಿ.ಯ ಸಾರ್ವಜನಿಕ ಬಳಕೆಯ ಭೂಮಿಯನ್ನು ಗುರುತಿಸಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಕೆ.ಐ.ಡಿ.ಬಿ.ಯವರು ಕೆಲ ತಾಂತ್ರಿಕ ಕಾರಣ ಮುಂದೊಡ್ಡಿ ಭೂಮಿ ನೀಡಲು ನಿರಾಕರಿಸಿದ್ದರಿಂದ ಈ ಪ್ರಸ್ತಾವನೆ ಕಾರ್ಯಗತವಾಗಲೇ ಇಲ್ಲ. ಈ ಹಿಂದೆ ಬೆಳಗಾವಿಯಿಂದ ಸುಮಾರು 17 ಕಿ.ಮೀ. ದೂರದ ಹಾಲಬಾವಿ ಬಳಿ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ 25 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಬಳಿಕ ಈ ಭೂಮಿಯನ್ನು ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್‌ನವರಿಗೆ ನೀಡಲಾಯಿತು. ಹೀಗಾಗಿ ಯೋಜನೆ ಅನುಷ್ಠಾನವಾಗಲಿಲ್ಲ.
2017ರಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಜಾಗ ಪಾಲಿಕೆ ಕೈತಪ್ಪಿತ್ತು. ಹೀಗಾಗಿ ಯೋಜನೆ ವಿಳಂಬವಾಗಿದ್ದು ಜಾಗ ಲಭ್ಯವಾದ ಬಳಿಕ ಡಿಪಿಆರ್ ಸಿದ್ಧಪಡಿಸಲಾಗುವುದು.| ಸಂಜಯ್ ದುಮ್ಮಗೋಳ ಪಾಲಿಕೆ ಆರೋಗ್ಯಾಧಿಕಾರಿ ಬೆಳಗಾವಿಸರ್ಕಾರ ಈ ಹಿಂದೆಯೇ ಯೋಜನೆ ರೂಪಿಸಿದೆ. ಕಸಾಯಿಖಾನೆ ನಿರ್ಮಾಣಕ್ಕೆ ಜಾಗ ಸಿಗುತ್ತಿಲ್ಲ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಜಾಗ ದೊರೆತ ತಕ್ಷಣ ಯೋಜನೆ ಆರಂಭಿಸಲಾಗುವುದು.| ಜಗದೀಶ ಕೆ. ಎಚ್. ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ