ಜಿಲ್ಲೆ

ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ಟ್ರ ಸ್ಟ್‌ನಲ್ಲಿ ಮೇಳೈಸಲಿದೆ ಆಧುನಿಕ ಗುರುಕುಲ ಪದ್ಧತಿ ಶಿಕ್ಷಣ

ಮಂಜುನಾಥ ತಿಮ್ಮಯ್ಯ ಮೈಸೂರು

ಹುಬ್ಬಳ್ಳಿಯಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ ‘ಆಧುನಿಕ ಗುರುಕುಲ ಪದ್ಧತಿ ಶಿಕ್ಷಣ’ ಮೇಳೈಸಲಿದೆ.

ರಾಜ್ಯ ಸರ್ಕಾರ ಅನ್ವಯ ಈ ಟ್ರಸ್ಟ್ ಶೀಘ್ರದಲ್ಲೇ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಹಸ್ತಾಂತರವಾಗಲಿದ್ದು, ಬಳಿಕ ಇದು ಭಾರತದ 2ನೇ, ದಕ್ಷಿಣ ಭಾರತದಲ್ಲೇ ಪ್ರಥಮ ಪ್ರದರ್ಶಕ ಕಲೆಗಳಿಗಾಗಿಯೇ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡಲಿದೆ.

ಈ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಲ್ಲಿ ಈಗಿರುವ ಶೈಕ್ಷಣಿಕ ಚಟುವಟಿಕೆ ಮುಂದುವರಿಕೆಯೊಂದಿಗೆ ಆಧುನಿಕ ಗುರುಕುಲ ಶಿಕ್ಷಣ ಪದ್ಧತಿ ಸಹ ಜಾರಿಗೊಳಿಸಲಾಗುತ್ತದೆ. ಇದನ್ನು ಸಂಗೀತ ವಿವಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.


ಟ್ರಸ್ಟ್‌ನ ಅಧೀನದಲ್ಲಿ ನಡೆಯುವ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರದಲ್ಲಿ ಸಂಗೀತಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಹಿಂದುಸ್ತಾನಿ ಸಂಗೀತವನ್ನು ಮಾತ್ರ ಕಲಿಸಲಾಗುತ್ತದೆ. ಇದರೊಂದಿಗೆ ಕರ್ನಾಟಕ ಸಂಗೀತವನ್ನೂ ಪರಿಚಯಿಸಲು ಸಂಗೀತ ವಿವಿ ಉದ್ದೇಶಿಸಿದೆ. ನೃತ್ಯ ಕಲೆಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅದಕ್ಕಾಗಿ ಭರತನಾಟ್ಯ ಸೇರಿದಂತೆ ವಿವಿಧ ನೃತ್ಯ ಕಲೆಯನ್ನು ಕಲಿಸಲಾಗುತ್ತದೆ.


ಉದ್ಯೋಗದೊಂದಿಗೆ ಪ್ರದರ್ಶಕ ಕಲೆಗಳನ್ನು ಶೈಕ್ಷಣಿಕವಾಗಿ ಕಲಿಯಲು ಅನುಕೂಲವಾಗಲು ಸಂಜೆ ತರಗತಿ ನಡೆಸುವ ಆಶಯವೂ ಇದೆ. ಜತೆಗೆ, ಶನಿವಾರ, ಭಾನುವಾರ ವಾರಾಂತ್ಯ ಕೋರ್ಸ್‌ಗಳನ್ನೂ ಪರಿಚಯಿಸುವ ಇರಾದೆಯನ್ನು ಸಂಗೀತ ವಿವಿ ಹೊಂದಿದೆ.

ವಿವಿಧ ಕೋರ್ಸ್‌ಗಳ ಪರಿಚಯ:


ಪಿಯುಸಿ ಓದಿದವರಿಗೆ 4 ವರ್ಷದ ಬಿ.ಪಿ.ಎ. (ಆನರ್ಸ್), ಯಾವುದೇ ಪದವಿ ಪಡೆದವರಿಗೆ 2 ವರ್ಷಗಳು ಎಂಪಿಎ, ಸ್ನಾತಕೋತ್ತರ ಪದವಿಯಾದ ಎಂ.ಎ.ನಲ್ಲಿ ಪಾಸಾದವರಿಗೆ 2 ವರ್ಷಗಳು ಡಿ.ಲಿಟ್, ಎಸ್ಸೆಸ್ಸೆಲ್ಸಿ, ಪಿಯುಸಿಯವರಿಗೆ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್, ಯಾವುದೇ ಪದವಿ ಪಡೆದವರಿಗೆ 1 ವರ್ಷ ಪಿ.ಜಿ. ಡಿಪ್ಲೊಮಾ ಪರಿಚಯಿಸಲಾಗುತ್ತಿದೆ.

ಹುಬ್ಬಳ್ಳಿಯ ಈ ಶಿಕ್ಷಣ ಕೇಂದ್ರದಲ್ಲಿ ಈಗಾಗಲೇ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಹೊಸ ವಿದ್ಯಾರ್ಥಿಗಳೂ ಪ್ರವೇಶ ಪಡೆದುಕೊಳ್ಳಬಹುದು. ಈ ಹಿಂದೆಯೇ ಈ ಟ್ರಸ್ಟ್‌ನೊಂದಿಗೆ ಸಂಗೀತ ವಿವಿ ಒಡಂಬಡಿಕೆ ಮಾಡಿಕೊಂಡಿದೆ. ಆ ಪ್ರಕಾರ ತರಗತಿ ಶುರುವಾಗಿವೆ. ಪದವಿ ಪರೀಕ್ಷೆಗಳಿಗೆ ಸಿದ್ಧತೆ ಸಹ ಮಾಡಿಕೊಳ್ಳಲಾಗಿದೆ.


ಈ ನಡುವೆ, ಈ ಟ್ರಸ್ಟ್ ಅನ್ನು ಸಂಗೀತ ವಿಶ್ವವಿದ್ಯಾಲಯದ ಆಡಳಿತ ಕಾರ್ಯವ್ಯಾಪ್ತಿಗೆ ಹಸ್ತಾಂತರಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಫೆಬ್ರವರಿ 28ರಂದು ಆದೇಶ ಹೊರಡಿಸಿದೆ. ಪ್ರಸ್ತುತ 21 ವಿದ್ಯಾರ್ಥಿಗಳಿದ್ದಾರೆ. ಸಂಸ್ಥೆಯ ನಿರ್ವಹಣೆಗೆ ವಾರ್ಷಿಕ ಸುಮಾರು 2.13 ಕೋಟಿ ರೂ. ವೆಚ್ಚವಾಗುತ್ತಿದೆ. ಈ ಆರ್ಥಿಕ ಹೊರೆಯಿಂದ ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಆದೇಶದಲ್ಲಿ ಏನಿದೆ?:


ಟ್ರಸ್ಟ್ ತನ್ನ ಎಲ್ಲ ಆಡಳಿತಾತ್ಮಕ, ಶೈಕ್ಷಣಿಕ ಕಾರ್ಯಚಟುವಟಿಕೆ, ಹಣಕಾಸು ನಿರ್ವಹಣೆಯನ್ನು ಸಂಗೀತ ವಿವಿ ಕುಲಪತಿ ಅವರ ವಿವೇಚನಾಧಿಕಾರದೊಂದಿಗೆ ನಿರ್ವಹಿಸಬೇಕು. ತಾತ್ಕಾಲಿಕ, ಹೊರಗುತ್ತಿಗೆ, ಕಾಯಂ ಹುದ್ದೆಗಳ ನೇಮಕಾತಿಗೆ ಸಂಗೀತ ವಿವಿ ಮೂಲಕ ಪ್ರಸ್ತಾವ ಸಲ್ಲಿಸಬೇಕು. ಟ್ರಸ್ಟ್‌ಗೆ ಮಂಜೂರಾಗಿರುವ ಹುದ್ದೆಗಳನ್ನು ಮಾತ್ರ ಮುಂದುವರಿಸಬೇಕು. ಹೆಚ್ಚುವರಿ ಹುದ್ದೆ, ಸಿಬ್ಬಂದಿಯನ್ನು ಅವಶ್ಯವಿದ್ದರೆ ಮುಂದುವರಿಸಬೇಕು. ಇಲ್ಲವಾದರೆ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.


ಸಂಸ್ಥೆಯ ಚರ-ಸ್ಥಿರ ಆಸ್ತಿಯನ್ನು ವರ್ಗಾವಣೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇನ್ಮುಂದೆ ವಾರ್ಷಿಕ ಅನುದಾನದ ಕೋರಿಕೆಯನ್ನು ಸಂಗೀತ ವಿವಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಸಂಗೀತ ವಿವಿ ಅಧಿನಿಯಮ-2009ರ ಅಡಿ ನಿರ್ವಹಿಸಬೇಕು. ಸಂಸ್ಥೆ ಆರಂಭವಾದಾಗಿನಿಂದ ಈವರೆಗೆ ನೀಡಲಾದ ಅನುದಾನದ ವೆಚ್ಚ ಮಾಹಿತಿಯನ್ನು ಕುಲಸಚಿವರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

ಸಂಗೀತದ ಎಲ್ಲ ಪ್ರಕಾರಗಳು ಮತ್ತು ಪ್ರದರ್ಶಕ ಕಲೆಗಳ ಉತ್ತೇಜನಕ್ಕೆ ಸಂಗೀತ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿದೆ. ಆದ್ದರಿಂದ ಟ್ರಸ್ಟ್ ಮೂಲಕ ಹಿಂದುಸ್ತಾನಿ ಸಂಗೀತ ಕೇಂದ್ರವನ್ನು ಪ್ರತ್ಯೇಕವಾಗಿ ಮುಂದುವರಿಸುವ ಅಗತ್ಯ ಇಲ್ಲ ಎಂದು ಸರ್ಕಾರ ಮನಗಂಡಿದೆ. ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆ, ಚರ-ಸ್ಥಿರ ಆಸ್ತಿಯನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಕ್ರಮ ವಹಿಸುವಂತೆ ಉನ್ನತ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯಗಳು) ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಾಕೀತು ಮಾಡಿದ್ದಾರೆ.

ಪ್ರಾದೇಶಿಕ ಕೇಂದ್ರವಾಗಿ ಪರಿವರ್ತನೆ


ಹುಬ್ಬಳ್ಳಿಯ ಈ ಕೇಂದ್ರವು ಸಂಗೀತ ವಿವಿ ಪ್ರಾದೇಶಿಕ ಕೇಂದ್ರವಾಗಿ ಹೊರಹೊಮ್ಮಲಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಯಲ್ಲಿ ಪ್ರಾದೇಶಿಕ ಕೇಂದ್ರ ತೆರೆಯಲು ನಿರ್ಣಯ ತೆಗೆದುಕೊಂಡಿದೆ. ಇದೀಗ ಈ ಟ್ರಸ್ಟ್ ಹಸ್ತಾಂತರದಿಂದ ಇದುವೇ ಪ್ರಾದೇಶಿಕ ಕೇಂದ್ರವಾಗಿ ಪರಿವರ್ತನೆಯಾಗಲಿದೆ.

ಹಸ್ತಾಂತರದಿಂದ ಏನು ಲಾಭ?:

ಇದು ಸಂಗೀತ ವಿವಿ, ಈ ಭಾಗದ ಜನರಿಗೂ ಅನುಕೂಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಚಟುವಟಿಕೆ ವಿಸ್ತರಣೆಗೆ ಇದು ವಿವಿಗೆ ಪೂರಕವಾಗಿದೆ. ಶಾಶ್ವತ ನೆಲೆಯೂ ಸಿಕ್ಕಂತಾಗಲಿದೆ. ಶಾಶ್ವತ ಕಟ್ಟಡ, ಮೂಲಸೌಕರ್ಯ ದೊರೆತಿರುವುದರಿಂದ ವಿವಿಗೆ ದೊಡ್ಡ ಆಸ್ತಿಯಾಗಲಿದೆ. ಜತೆಗೆ, ಈ ಭಾಗದ ಜನರು, ಸಂಗೀತ ವಿವಿಗೆ ಇದು ಸೇತುವೆಯಾಗಲಿದ್ದು, ಅಲ್ಲಿಯ ಜನರು ಪ್ರದರ್ಶಕ ಕಲೆ ಕಲಿಯಲು ವೇದಿಕೆ ದೊರೆಯಲಿದೆ.

ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅನ್ನು ಶೀಘ್ರದಲ್ಲೇ ಸಂಗೀತ ವಿವಿ ವ್ಯಾಪ್ತಿಗೆ ಪಡೆದುಕೊಳ್ಳಲಾಗುವುದು. ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಟ್ರಸ್ಟ್‌ನಲ್ಲಿರುವ ಪ್ರಸ್ತುತ ಕಲಿಕಾ ಚಟುವಟಿಕೆ ಮುಂದುವರಿಸಿಕೊಂಡು ಹೋಗಲಾಗುವುದು. ಜತೆಗೆ, ಸಂಗೀತ ವಿವಿ ಕಾಯ್ದೆ ಪ್ರಕಾರ ಕಲಿಕೆಯನ್ನೂ ವಿಸ್ತರಣೆ ಮಾಡಲಾಗುವುದು.
ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಕುಲಪತಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು