ಜಿಲ್ಲೆ

ಕರಾವಳಿಯಲ್ಲಿ 25 ಮತ್ತು 27ರಂದು ಸಾಧಾರಣ ಮಳೆ

ಇಂದಿರಾ ಎನ್ ಕೆ

ಮಂಗಳೂರು: ಕರಾವಳಿಯ ಗ್ರಾಮೀಣ ಭಾಗದಲ್ಲಿ ಗುರುವಾರ ಸಂಜೆ ಸಾಧಾರಣ ಮಳೆಯಾಗಿದ್ದು, ಒಟ್ಟಾರೆಯಾಗಿ ಜಿಲ್ಲಾದ್ಯಂತ ಮಳೆ ಕಡಿಮೆಯಾಗಿದೆ.  ಇಡೀ ದಿನ ಬಿಸಿಲು ಸಹಿತ ಮೋಡ, ಅಲ್ಲಲ್ಲಿ ತುಂತುರು ಹನಿ ಕಂಡುಬಂದಿದ್ದು, ದಿನಪೂರ್ತಿ ಬಿಸಿ ವಾತಾವರಣವಿತ್ತು. ಹವಾಮಾನ ಇಲಾಖೆ ಪ್ರಕಾರ ಅ.25 ಮತ್ತು 27ರಂದು ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ದ.ಕ.ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ಮೋಡ ಕವಿದಿದ್ದು, ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಇದನ್ನು ಹೊರತುಪಡಿಸಿದರೆ ಇಡೀ ದಿನ ಮೋಡ ಮುಸುಕಿದ ವಾತಾವರಣ ಇದ್ದು, ತುಂತುರು ಹನಿದಿದೆ. ಸಂಜೆ ವೇಳೆ ಮಂಗಳೂರು, ಬಂಟ್ವಾಳ ಸೇರಿದಂತೆ ಹಲವೆಡೆ ಗುಡುಗು ಸಹಿತ ಹನಿ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಹಗುರ ಮಳೆಯ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಗರಿಷ್ಠ 28.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯ ಸರಾಸರಿ ಮಳೆ 6 ಮಿ.ಮೀ. ಆಗಿದೆ. ಉಳ್ಳಾಲ 6.8 ಮಿ.ಲಿ., ಬೆಳ್ತಂಗಡಿ 3.1 ಮಿ.ಮೀ, ಬಂಟ್ವಾಳ 6.8 ಮಿ.ಮೀ, ಮಂಗಳೂರು 2.3 ಮಿ.ಮೀ, ಪುತ್ತೂರು 7 ಮಿ.ಮೀ, ಸುಳ್ಯ 5.1 ಮಿ.ಮೀ, ಮೂಡುಬಿದಿರೆ 5.9 ಮಿ.ಮೀ, ಕಡಬ 4 ಮಿ.ಮೀ. ಮಳೆ ದಾಖಲಾಗಿದೆ.