ಮದ್ದೂರು ತಾಲೂಕಿನ ಹಳೆಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಛಾವಣಿ ಹಾರಿ ಹೋಗಿರುವುದರ ಜತೆಗೆ ಶಾಲೆಯಲ್ಲಿದ್ದ ಉಪಕರಣಗಳು ಜಖಂಗೊಂಡಿರುವುದು. 
ಜಿಲ್ಲೆ

ಮದ್ದೂರು ತಾಲೂಕಿನ ಹಲವೆಡೆ ಸಾಧಾರಣ ಮಳೆ

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಸಾಧಾರಣ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ ಜನರು ವರುಣನ ಕೃಪೆಯಿಂದ ನಿಟ್ಟುಸಿರು ಬಿಡುವಂತಾಯಿತು.

ಮದ್ದೂರು ಪಟ್ಟಣ, ಕೌಡ್ಲೆ, ಹರಳಕೆರೆ, ಹಳೇ ಹಳ್ಳಿ, ಚಂದಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆ ಬಂದ ಬಗ್ಗೆ ವರದಿಯಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಕಂಡಿರುವುದು ಒಂದೆಡೆಯಾದರೆ, ಮಳೆಯಿಂದ ಹಲವು ರೀತಿಯ ಅವಘಡಗಳು ಸಂಭವಿಸಿರುವುದು ಮತ್ತೊಂದೆಡೆಯಾಗಿದೆ.

ತಾಲೂಕಿನ ಹಳೆಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಗ್ರಾಮದ ಸರ್ಕಾರಿ ಶಾಲೆಯ ಛಾವಣಿ ಹಾರಿ ಹೋಗಿದೆ. ಅಲ್ಲದೆ, ಶಾಲೆಯಲ್ಲಿದ್ದ ಕೆಲವು ಉಪಕರಣಗಳು ಜಖಂಗೊಂಡು ಸ್ವಲ್ಪ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಗ್ರಾಮದಲ್ಲಿ ಹಲವು ಮರಗಳು ಉರುಳಿ ಬಿದ್ದು ಕೆಲಕಾಲ ಆತಂಕ್ಕೆ ಕಾರಣವಾಗಿತ್ತು. ಅದೃಷ್ಟವಶಾತ್ ಯಾವುದೇ ಅವಘಡಗಳು ಸಂಭವಿಸಿಲ್ಲ.

ತಾಲೂಕಿನ ಚಂದಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಬೇವಿನ ಮರ ಧರೆಗೆ ಉರುಳಿಬಿದ್ದಿದೆ. ಅಂತೆಯೇ ಹರಳಕೆರೆಯಲ್ಲಿ ಮಳೆ ನೀರು ಹರಿದ ಪರಿಣಾಮ ರೈತರು ಕೆಲಕಾಲ ಮಳೆಯಲ್ಲಿ ನಿಂತು ಸಂಭ್ರಮ ವ್ಯಕ್ತಪಡಿಸಿದರು.