ಹನೂರಿನಲ್ಲಿ ಮಳೆ ನಡುವೆಯೇ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಕೊಡೆ ಹಿಡಿದು ತೆರಳುತ್ತಿರುವುದು.  
ಜಿಲ್ಲೆ

ಹನೂರು ವ್ಯಾಪ್ತಿಯಲ್ಲಿ ಸಾಧಾರಣ ಮಳೆ

ಅಭಿನಯ್ ಎಚ್.ಎಂ

ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ಬೆಳಗ್ಗೆ ತುಂತುರು ಹನಿಯೊಂದಿಗೆ ಸುಮಾರು 2 ಗಂಟೆ ಸಾಧಾರಣ ಮಳೆಯಾಯಿತು.

ತಾಲೂಕಿನಾದ್ಯಂತ ಬೆಳಗ್ಗೆಯಿಂದಲೂ ಮೋಡ ಕವಿದ ವಾತವರಣವಿತ್ತು. ಹಾಗಾಗಿ ಪಟ್ಟಣದಲ್ಲಿ 7.30 ರಲ್ಲಿ ಆರಂಭವಾದ ಮಳೆ 10 ರವರೆಗೆ ಸುರಿಯಿತು. ಹಾಗೆಯೇ ರಾಮಾಪುರ ಹಾಗೂ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಆಗಾಗ್ಗೆ ಮಳೆ ಬೀಳುತ್ತಲೇ ಇತ್ತು. ಇದರಿಂದ ಬೆಳಗ್ಗೆ ವೇಳೆ ಶಾಲಾ, ಕಾಲೇಜಿಗೆ ತೆರಳುವ ಬಹುತೇಕ ವಿದ್ಯಾರ್ಥಿಗಳು ಕೊಡೆ ಹಿಡಿದು ಸಾಗಿದರೆ, ಇನ್ನೂ ಕೆಲ ವಿದ್ಯಾರ್ಥಿಗಳು ನೆನೆಯುತ್ತಾ ತೆರಳಿದರು.

ಇತ್ತ ಮಳೆಯಿಂದಾಗಿ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಪಾಲಕರು ತೊಂದರೆ ಅನುಭವಿಸಿದರು. ಗ್ರಾಮೀಣ ಪ್ರದೇಶದಿಂದ ಪಟ್ಟಣದ ಶಾಲಾ, ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕೆಲ ಕಾಲ ಅಂಗಡಿ ಮುಂಗಟ್ಟನ್ನು ಆಶ್ರಯಿಸಬೇಕಾಯಿತು. ಇದರಿಂದ ನಿಗದಿತ ವೇಳೆ ಶಾಲಾ, ಕಾಲೇಜಿಗೆ ತೆರಳಲು ಸಾಧ್ಯವಾಗಲಿಲ್ಲ.

ಇನ್ನು ಈ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜಮೀನಿನ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸಕ್ಕೆ ತೆರಳಿದ್ದು, ಮನೆಗೆ ವಾಪಾಸ್ಸಾದರು.